ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಆದೇಶದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ ಮಹುವಾ ಮೊಯಿತ್ರಾ ಶುಕ್ರವಾರ ಸರ್ಕಾರಿ ವಸತಿ ಗೃಹದಿಂದ ಹೊರನಡೆದಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಕಾನೂನು ಸಮರದ ಬಳಿಕ ಡೈರೆಕ್ಟರೇಟ್ ಆಫ್ ಎಸ್ಟೇಟ್ (DoE) ಅವರನ್ನು ಅಧಿಕೃತವಾಗಿ ಬಂಗಲೆಯಿಂದ ತೆರವು ಮಾಡಿಸಲು ತಂಡ ಕಳುಹಿಸಿತ್ತು. ಅವರ ಆಗಮನಕ್ಕೂ ಮುನ್ನ ಮಹುವಾ ಮೊಯಿತ್ರಾ ಬಂಗಲೆ ತೊರೆದಿದ್ದಾರೆ. ಸದ್ಯ ಬಂಗಲೆ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
"ಟೆಲಿಗ್ರಾಫ್ ಲೇನ್‌ನಲ್ಲಿರುವ ಮನೆ ಸಂಖ್ಯೆ 9ಬಿಯಲ್ಲಿ ಮಹುವಾ ಉಳಿದುಕೊಂಡಿದ್ದರು. ಅಧಿಕಾರಿಗಳು ಬರುವ ಮೊದಲೇ ಇಂದು ಬೆಳಿಗ್ಗೆ 10 ಗಂಟೆಗೆ ಬಂಗಲೆ ಖಾಲಿ ಮಾಡಲಾಗಿದೆ. ಯಾವುದೇ ತೆರವು ನಡೆದಿಲ್ಲ. ಮನೆಯನ್ನು ಡಿಒಇ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ" ಎಂದು ಮೊಯಿತ್ರಾ ಪರ ವಕೀಲ ಶಾದನ್ ಫರಾಸತ್ ಹೇಳಿದ್ದಾರೆ. ಸರ್ಕಾರಿ ಬಂಗಲೆ ಎಸ್ಟೇಟ್ ನಿರ್ದೇಶನಾಲಯಕ್ಕೆ ಹಸ್ತಾಂತರಗೊಂಡ ಬಗ್ಗೆ ಸರ್ಕಾರಿ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.
ಇದಕ್ಕೂ ಮುನ್ನ ಬಂಗಲೆಯನ್ನು ಖಾಲಿ ಮಾಡುವಂತೆ ಆದೇಶಿಸಿದ್ದ ಡೈರೆಕ್ಟರೇಟ್ ಆಫ್ ಎಸ್ಟೇಟ್, ಅವರಿಗೆ ಜ. 7ರವರೆಗೆ ಕಾಲಾವಕಾಶ ನೀಡಿತ್ತು. ಆದರೆ, ನೋಟಿಸ್ ಪ್ರಶ್ನಿಸಿ ಮೊಯಿತ್ರಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾನು ಒಂಟಿ ಮಹಿಳೆಯಾಗಿರುವುದರಿಂದ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಸದ್ಯಕ್ಕೆ ತಮಗೆ ಸರ್ಕಾರಿ ವಸತಿಗೃಹ ಅವಶ್ಯಕವೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ನ್ಯಾಯಾಲಯವು ಅರ್ಜಿಯನ್ನು ನಿರಾಕರಿಸಿತ್ತು. ಸಂಸದೆಯಾಗಿ ಅಮಾನತುಗೊಂಡಿರುವ ಕಾರಣ ಅರ್ಜಿದಾರರಿಗೆ ಸರ್ಕಾರಿ ಬಂಗಲೆಯಲ್ಲಿ ವಾಸಿಸಲು ಯಾವುದೇ ಹಕ್ಕಿಲ್ಲ ಎಂದು ಹೈಕೋರ್ಟ್ ಆದೇಶಿಸಿತ್ತು. ಅದರನ್ವಯ ಬಂಗಲೆ ಖಾಲಿ ಮಾಡುವಂತೆ ಹೊಸದಾಗಿ ನೋಟಿಸ್ ಸಹ ನೀಡಲಾಗಿತ್ತು. ನೋಟಿಸ್ನಲ್ಲಿ ಕೆಲವು ಕಠಿಣ ಕಾನೂನುಗಳನ್ನು ಸಹ ಪ್ರಸ್ತಾಪಿಸಲಾಗಿತ್ತು.
ಕಳೆದ ವರ್ಷ ಡಿಸೆಂಬರ್ 8ರಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಶ್ನೆಗಳಿಗೆ ಹಣದ ಪ್ರಕರಣದಲ್ಲಿ ಮಹುವಾರನ್ನು ಉಚ್ಚಾಟಿಸಿದ್ದರು. ನಂತರ ನಿಯಮಾನುಸಾರ ಬಂಗಲೆಯನ್ನು ಖಾಲಿ ಮಾಡುವಂತೆಯೂ ತಿಳಿಸಲಾಗಿತ್ತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಂಸದರಿಗೆ ಮೀಸಲಿಟ್ಟ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಮಹುವಾ ಅವರಿಗೆ ನೋಟಿಸ್ ಕಳುಹಿಸಿತು. ಈ ನೋಟಿಸ್ ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಸರ್ಕಾರಿ ನಿವಾಸ ಮುಂದುವರಿಕೆ; ಎಸ್ಟೇಟ್ ನಿರ್ದೇಶನಾಲಯ ಸಂಪರ್ಕಿಸುವಂತೆ ಮಹುವಾಗೆ ಸೂಚನೆ