ನವದೆಹಲಿ: ರಾಹುಲ್ ಗಾಂಧಿ ಲಂಡನ್‌ನಲ್ಲಿ ನೀಡಿದ ವಿವಾದಿತ ಪ್ರಜಾಪ್ರಭುತ್ವ ಹೇಳಿಕೆ, 'ಅದಾನಿ ಹಗರಣ'ದ ತನಿಖೆ ನಡೆಸುವ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ತೀವ್ರ ತಿಕ್ಕಾಟ ಮುಂದುವರೆದಿದ್ದು 6ನೇ ದಿನದ ಸಂಸತ್ ಬಜೆಟ್ ಅಧಿವೇಶನವೂ ಆಹುತಿಯಾಗುವ ಸಾಧ್ಯತೆ ಗೋಚರಿಸಿದೆ. ಇಂದು ಬೆಳಗ್ಗೆ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನಗಳಲ್ಲಿ ಗದ್ದಲ ಶುರುವಾದ ಕಾರಣ ಸಭಾಧ್ಯಕ್ಷರು ಮಧ್ಯಾಹ್ನ 2 ಗಂಟೆಗೆ ಸದನಗಳನ್ನು ಮುಂದೂಡಿದ್ದಾರೆ.
ಬಜೆಟ್ ಮಂಡನೆಯಾದ ತಿಂಗಳ ಬಳಿಕ ಆರಂಭವಾದ 2ನೇ ಚರಣದ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ತೀವ್ರ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ್ದಾರೆ ಎಂಬುದನ್ನು ಆಡಳಿತ ಪಕ್ಷ ಬಲವಾಗಿ ವಿರೋಧಿಸುತ್ತಿದೆ. ಸದನದ ಸದಸ್ಯರೊಬ್ಬರು ಈ ರೀತಿ ದೇಶದ ಮರ್ಯಾದೆಯನ್ನು ವಿದೇಶದಲ್ಲಿ ಹಾಳು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ಅವರು ದೇಶದ ಜನರಿಗೆ ಸಂಸತ್ತಿನಲ್ಲಿ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.
ಇತ್ತ ವಿಪಕ್ಷಗಳೂ ಕೂಡ ಶ್ರೀಮಂತ ಉದ್ಯಮಿ ಅದಾನಿ ಸಂಸ್ಥೆಯಿಂದ ನಡೆದಿದೆ ಎಂದು ಹೇಳಲಾದ ಹಗರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಹಿಂಡನ್ಬರ್ಗ್ ವರದಿಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಅಲ್ಲದೇ, ಸಂಸತ್ತಿನಲ್ಲಿ ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ತೀವ್ರ ವಾಗ್ದಾಳಿ ನಡೆಸುತ್ತಿವೆ. ಇದರಿಂದ ಸಂಸತ್ ಅಧಿವೇಶನ 5 ದಿನ ಕಳೆದರೂ ಯಾವುದೇ ಫಲಪ್ರದ ಕಾಣುತ್ತಿಲ್ಲ.
ಮಸೂದೆಗಳಿಗೆ ಸಿಗುತ್ತಾ ಅಂಗೀಕಾರ?: 2ನೇ ಹಂತದ ಬಜೆಟ್ ಅಧಿವೇಶನ ಏಪ್ರಿಲ್ 6 ರವರೆಗೆ ನಡೆಯಲಿದೆ. ಹಣಕಾಸು ಮಸೂದೆಯ ಅಂಗೀಕಾರ ಸೇರಿದಂತೆ ರಾಜ್ಯಸಭೆಯಲ್ಲಿ 26 ಮತ್ತು ಲೋಕಸಭೆಯಲ್ಲಿ 9 ಮಸೂದೆಗಳು ಅಂಗೀಕಾರಕ್ಕಾಗಿ ಬಾಕಿ ಉಳಿದಿವೆ. ಹಣಕಾಸು ಮಸೂದೆಯನ್ನು ಸರ್ಕಾರ ಪಾಸು ಮಾಡಿಕೊಂಡರೂ ಉಳಿದ ಮಸೂದೆಗಳಿಗೆ ಚರ್ಚೆ ಮತ್ತು ಅಂಗೀಕಾರ ಪಡೆಯಬೇಕಿದೆ. ಆದರೆ, ಕಲಾಪ ನಡೆಯದೇ ಗದ್ದಲದಲ್ಲೇ ಮುಕ್ತಾಯವಾಗುತ್ತಿರುವ ಕಾರಣ ಬಿಲ್ಗಳು ಪಾಸ್ ಆಗಲಿವೆಯಾ ಎಂಬ ಪ್ರಶ್ನೆ ಮೂಡಿದೆ.
ಇಂದು ಏನೇನಾಯ್ತು?: ಇಂದು ಬೆಳಗ್ಗೆ ಅಧಿವೇಶನದ ಆರಂಭದಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ, "ಅದಾನಿ ಗ್ರೂಪ್‌ನಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಸರ್ಕಾರದ ಪಾತ್ರವನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಯನ್ನು ರಚನೆ ಮಾಡುವ ಅಗತ್ಯತೆ" ಕುರಿತು ಚರ್ಚಿಸಲು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದರು. ಅದಾನಿ ಗ್ರೂಪ್ ಬಗ್ಗೆ ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಲ್ಲಿ ಸರ್ಕಾರ ವೈಫಲ್ಯ ಖಂಡಿಸಿ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಲೋಕಸಭೆಯಲ್ಲಿ ಮುಂದೂಡಿಕೆ ನಿಲುವಳಿ ಮಂಡಿಸಿದರು.
ವಿರೋಧ ಪಕ್ಷಗಳ ಸಭೆ: ಇನ್ನೊಂದೆಡೆ ಸಮಾನ ಮನಸ್ಕ ವಿರೋಧ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿ ಸಂಸತ್ ಕಲಾಪದ ಮತ್ತು ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಕಾರ್ಯತಂತ್ರ ರೂಪಿಸುವ ಭಾಗವಾಗಿ ಚರ್ಚೆ ನಡೆಸಿದರು.
ಸಂಸತ್ ಕಲಾಪ ವ್ಯರ್ಥವಾಗುತ್ತಿರುವ ಬಗ್ಗೆ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಮಾರ್ಚ್ 13 ರಿಂದ ನಡೆಯುತ್ತಿರುವ ಈ ನಾಟಕವು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಿದೆ. ಇಲ್ಲದೇ ಹೋದಲ್ಲಿ ಇದೆಲ್ಲಾ ನಡೆಯಲು ಸಾಧ್ಯವಿಲ್ಲ. ಇಂದು ಕೂಡ ಸಂಸತ್ತಿನ ಕಲಾಪಕ್ಕೆ ಆಡಳಿತ ಪಕ್ಷ ಅವಕಾಶ ನೀಡಲಿಲ್ಲ. ಸ್ವಾತಂತ್ರ್ಯಾ ನಂತರ ನಡೆದ ಅತಿದೊಡ್ಡ ಹಗರಣ ಎಂದೇ ಹೇಳಲಾದ ಅದಾನಿ ಸಂಸ್ಥೆಯ ಮೇಲೆ ತನಿಖೆ ನಡೆಸಲು ಜೆಪಿಸಿ ರಚನೆ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಅದನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿಗೆ ಜೆಪಿಸಿ ಎಂದರೆ ಯಾಕೆ ಭಯ? ಜೆಪಿಸಿ ಕೈಗೆತ್ತಿಕೊಂಡರೆ ಬಿಜೆಪಿಯ ಮುಖವಾಡ ಕಳಚಿ ಬೀಳುತ್ತದೆ. ಮಧ್ಯಮ ವರ್ಗ ಮತ್ತು ಬಡವರ ಹಣವನ್ನು ಕಸಿದುಕೊಂಡು ಅದಾನಿ ಖಜಾನೆ ತುಂಬಿದವರು ತನಿಖೆಯಿಂದ ಬಟಾಬಯಲಾಗುತ್ತಾರೆ ಎಂಬ ಭಯವಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದರು.
ಇದನ್ನೂ ಓದಿ: ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ ಇಡಿ ವಿಚಾರಣೆಗೆ ಹಾಜರು