ನವದೆಹಲಿ: ಲಕ್ಷದ್ವೀಪದ ತನ್ನ ಕಾನೂನು ವ್ಯವಹಾರಗಳಿಗೆ ಹೈಕೋರ್ಟ್ ವ್ಯಾಪ್ತಿಯನ್ನು ಕೇರಳ ಹೈಕೋರ್ಟ್ನಿಂದ ಕರ್ನಾಟಕ ಹೈಕೋರ್ಟ್ಗೆ ವರ್ಗಾಯಿಸಲಾಗುತ್ತದೆಯೇ?, ಈ ಸಂಬಂಧ ಅಲ್ಲಿನ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಚಿಂತನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಭಾನುವಾರ ಸಂಜೆ ಸ್ಪಷ್ಟನೆ ನೀಡಿದ್ದ ಲಕ್ಷದ್ವೀಪ ಜಿಲ್ಲಾಧಿಕಾರಿ ಎಸ್.ಅಸ್ಕರ್ ಅಲಿ, ಇಂಥ ಯಾವುದೇ ಪ್ರಸ್ತಾಪ ತಮ್ಮ ಮುಂದಿ ಇಲ್ಲ. ಇದರ ಜೊತೆಗೆ ವಾಟ್ಸಪ್ ಸಂದೇಶವೊಂದರಲ್ಲಿ ಈ ವಿಷಯ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದುದು ಎಂದಿದ್ದರು.
ಈಗ ಮತ್ತೊಮ್ಮೆ ಅಧಿಕಾರಿಗಳು ಹೈಕೋರ್ಟ್ ವ್ಯಾಪ್ತಿಯ ವರ್ಗಾವಣೆ ಬಗ್ಗೆ ಹೇಳಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ. ಈ ಬಗ್ಗೆ ಲಕ್ಷದ್ವೀಪ ಚೀಫ್ ಸೆಕ್ರೆಟರಿ ಎ.ಅನ್ಬರಸು ಕೂಡಾ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಈ ನಿರ್ಧಾರವೇಕೆ?
ಈಗಾಗಲೇ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಲಕ್ಷದ್ವೀಪದಲ್ಲಿ ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿರುವ ದೂರುಗಳು ಇವರ ಮೇಲಿವೆ. ಗೂಂಡಾ ಕಾಯ್ದೆ ಮತ್ತು ಮೀನುಗಾರರ ಗುಡಿಸಲುಗಳ ತೆರವು ಕಾರ್ಯಾಚರಣೆ ವಿರುದ್ಧ ಸ್ಥಳೀಯರು ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಕೇಸ್; 2 ಕೋಟಿ ರೂ. ಪರಿಹಾರ ನೀಡಲು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ ಕೋರ್ಟ್ ಆದೇಶ
ಕೇರಳದ ಕೆಲವು ಶಾಸಕರು ಮತ್ತು ಸಂಸದರು ಪ್ರಫುಲ್ ಪಟೇಲ್ ಅವರ ಕಾನೂನುಗಳು ಜನವಿರೋಧಿ ಎಂದು ಆರೋಪಿಸುತ್ತಿದ್ದಾರೆ. ಈಗಾಗಲೇ ಪ್ರಫುಲ್ ವಿರುದ್ಧ ಕೋರ್ಟ್‌ನಲ್ಲಿ 11 ರಿಟ್ ಅರ್ಜಿ ಸೇರಿದಂತೆ 23 ಅರ್ಜಿಗಳು ಸಲ್ಲಿಕೆಯಾಗಿವೆ. ತಮಿಳುನಾಡು ಸಿಎಂ ಸ್ಟಾಲಿನ್ ಕೂಡಾ ಪ್ರಫುಲ್ರನ್ನು ವಾಪಸ್ ಕರೆಸಿಕೊಳ್ಳಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದರು.
ಇದೇ ಕಾರಣಕ್ಕಾಗಿ ಲಕ್ಷದ್ವೀಪ ತನ್ನ ಕಾನೂನು ವ್ಯವಹಾರಗಳಿಗೆ ಹೈಕೋರ್ಟ್ ವ್ಯಾಪ್ತಿಯನ್ನು ಕರ್ನಾಟಕಕ್ಕೆ ಸ್ಥಳಾಂತರ ಮಾಡಲು ಆಡಳಿತಾಧಿಕಾರಿ ಪ್ರಯತ್ನಿಸುತ್ತಿದ್ದಾರೆ ಎಂದು ಅಂದಾಜಿಸಬಹುದು. ಇನ್ನು ಸಂಸತ್ತಿನ ಕಾನೂನು ಮೂಲಕವೇ ಹೈಕೋರ್ಟ್ ವ್ಯಾಪ್ತಿಯನ್ನು ವರ್ಗಾವಣೆ ಮಾಡಲು ಸಾಧ್ಯವಿರುತ್ತದೆ.
'ಯಾರಿಗೂ ಈ ಐಡಿಯಾ ಬಂದಿಲ್ಲ'
ಕರ್ನಾಟಕ ಹೈಕೋರ್ಟ್ಗೆ ಕಾನೂನು ವ್ಯಾಪ್ತಿ ವರ್ಗಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್, ಇದು ಸಂಪೂರ್ಣವಾಗಿ ತಪ್ಪು ನಿರ್ಧಾರ. ಲಕ್ಷದ್ವೀಪದಲ್ಲಿ ಮಲಯಾಳಂ ಮಾತನಾಡುವವರ ಸಂಖ್ಯೆ ಹೆಚ್ಚಿದ್ದು, ಕೇರಳ ಹೈಕೋರ್ಟ್ ಸೂಕ್ತವಾಗಿರುತ್ತದೆ. ಮಾತೃಭಾಷೆಯಲ್ಲಿ ಹೈಕೋರ್ಟ್ ವ್ಯವಹಾರಗಳು ನಡೆದರೆ ಚೆನ್ನಾಗಿರುತ್ತದೆ ಎಂದಿದ್ದಾರೆ.
ಈವರೆಗೆ 36 ಮಂದಿ ಆಡಳಿತಾಧಿಕಾರಿಗಳು ಲಕ್ಷದ್ವೀಪದಲ್ಲಿ ಆಡಳಿತ ನಡೆದಿದ್ದು, ಈ ರೀತಿಯ ಯೋಚನೆ ಯಾರಿಗೂ ಬಂದಿರಲಿಲ್ಲ ಎಂದು ಪ್ರಫುಲ್ ಪಟೇಲ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜೊತೆಗೆ ಪ್ರಫುಲ್ ಅವರಿಂದ ಲಕ್ಷದ್ವೀಪವನ್ನು ರಕ್ಷಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.