ಕೊಚ್ಚಿ (ಕೇರಳ) : ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿರುವ ನಾಲ್ಕು ದಶಕಗಳಷ್ಟು ಹಳೆಯದಾದ ಮದ್ರಸಾವನ್ನು ನೆಲಸಮಗೊಳಿಸಲು ಆದೇಶಿಸಿ ಲಕ್ಷದ್ವೀಪ ಆಡಳಿತ ನೀಡಿರುವ ನೋಟಿಸ್ಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಅಲ್ ಮದ್ರಸತುಲ್ ಉಲೂಮಿಯ್ಯದ ಅಧ್ಯಕ್ಷ ಝೈನುಲ್ ಅಬಿದೀನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯರಾಘವನ್ ಅವರಿದ್ದ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಅಲ್ಲದೆ, ನಾಲ್ಕು ವಾರಗಳಲ್ಲಿ ಪ್ರತಿ ಆಕ್ಷೇಪಣೆ ಸಲ್ಲಿಸುವಂತೆ ಲಕ್ಷದ್ವೀಪ ಆಡಳಿತಕ್ಕೆ ನ್ಯಾಯಮೂರ್ತಿ ಸೂಚಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ಮುಂದುವರೆಸಲಾಗುವುದು, ಅಲ್ಲಿಯವರೆಗೆ ಮದ್ರಸದ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
1965ರ ಲಕಾದಿವ್ ಮಿನಿಕಾಯ್ ಮತ್ತು ಅಮಿನಿದಿವಿ ದ್ವೀಪಗಳ ಭೂ ಕಂದಾಯ ಮತ್ತು ಹಿಡುವಳಿ ನಿಯಂತ್ರಣ ನಿಯಮ 15 ಮತ್ತು 1968 ರ ಲಕಾದಿವ್, ಮಿನಿಕಾಯ್ ಮತ್ತು ಅಮಿನಿದಿವಿ ದ್ವೀಪಗಳ ಭೂ ಬಾಡಿಗೆನಿಯಮ 15 ಪ್ರಕಾರ, ನೋಟಿಸ್ ನೀಡಲಾಗಿದೆ. ಪ್ರಸ್ತುತ ಮದ್ರಸ ಆಕ್ರಮಿತ ಭೂಮಿಯಲ್ಲಿದೆ ಎಂದು ಲಕ್ಷದ್ವೀಪ ಆಡಳಿತ ನ್ಯಾಯಾಲಯಕ್ಕೆ ತಿಳಿಸಿದೆ.
ಆದರೆ, 1980 ರ ನಿಯಮ 14 (2) ರ ಅಡಿಯಲ್ಲಿ ಅರ್ಜಿದಾರರರಿಗೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಆದ್ದರಿಂದ ಸರಿಯಾಗಿ ಪರಿಶೀಲಿಸದೆ 'ಪಂದಾರಂ' (ಸರ್ಕಾರಿ ಭೂಮಿ) ಆಕ್ರಮಿಸಿಕೊಂಡ ಜಾಗ ಎನ್ನಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಓದಿ : ದೇಶದಲ್ಲಿ 4ನೇ ಪರವಾನಗಿ ಪಡೆದ ನಾಗರಿಕ ಮಹಿಳಾ ಸ್ಕೈಡೈವರ್ ಖ್ಯಾತಿಗೆ ಶ್ವೇತಾ ಪರ್ಮಾರ್ ಭಾಜನ
1980 ರ ನಿಯಮಾವಳಿಯ ನಿಬಂಧನೆಗಳ ಪ್ರಕಾರ, ಜಮೀನು ತೆರವುಗೊಳಿಸುವ ಅಥವಾ ಇತರ ಉದ್ದೇಶಗಳಿಗೆ ಬಳಸಿಕೊಳ್ಳುವ ಸಂಬಂಧ ನೋಟಿಸ್ ಜಾರಿಗೊಳಿಸುವ ಮೊದಲು ಸಂಬಂಧಿತ ನ್ಯಾಯ ವ್ಯಾಪ್ತಿಯ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಮದ್ರಸಾಕ್ಕೆ ನೋಟಿಸ್ ನೀಡಿರುವ ಜಿಲ್ಲಾಧಿಕಾರಿಯ ಕ್ರಮ ಸರಿಯಾದುದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಲ್ಪೇನಿ ದ್ವೀಪದ ಕೆಲ ಭೂ ಮಾಲೀಕರು ಕೂಡ ಇದೇ ರೀತಿಯ ನೋಟಿಸ್ ಸ್ವೀಕರಿಸಿದ್ಧಾರೆ ಎಂದು ತಿಳಿದು ಬಂದಿದೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಅಂತಹದ್ದನ್ನು ತ್ವರಿತವಾಗಿ ತೆರವುಗೊಳಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.
ಕವರತ್ತಿ, ಬೆಂಗರಂ, ಚೆರಿಯಂ ಮತ್ತು ಸುಹಾಲಿ ದ್ವೀಪದ ಜನರು ಕೂಡ ಸಮುದ್ರ ತೀರ ಪ್ರದೇಶದ 20 ಮೀಟರ್ ಅಂತರದಲ್ಲಿರುವ ಮನೆಗಳನ್ನು ಧ್ವಂಸ ಮಾಡುವ ಎಚ್ಚರಿಕೆಯ ನೋಟಿಸ್ ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.