ನವದೆಹಲಿ: ನೀತಿ ಆಯೋಗದ ಮೂರನೇ ವರ್ಷದ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಹರಿಯಾಣಗಳು ಪ್ರಥಮ ಮೂರು ಸ್ಥಾನಗಳನ್ನು ಗಳಿಸಿವೆ. ನೀತಿ ಆಯೋಗದ ಭಾರತ ಆವಿಷ್ಕಾರ ಸೂಚ್ಯಂಕ 2021 (ಇಂಡಿಯಾ ಇನೋವೇಶನ್) ಪ್ರಾದೇಶಿಕ ಮಟ್ಟದಲ್ಲಿ ಆವಿಷ್ಕರಿಸುವ ಸಾಮರ್ಥ್ಯ ಮತ್ತು ಅದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಪರಿಶೀಲಿಸುತ್ತದೆ.
ನೀತಿ ಆಯೋಗದ ವೈಸ್ ಚೇರಮನ್ ಸುಮನ್ ಬೆರಿ ಗುರುವಾರ ಸೂಚ್ಯಂಕ ಬಿಡುಗಡೆ ಮಾಡಿದರು. ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕವನ್ನು ಜಾಗತಿಕ ಆವಿಷ್ಕಾರ ಸೂಚ್ಯಂಕ ಮಾನದಂಡಗಳ ಸಮಾನವಾಗಿ ರೂಪಿಸಲಾಗಿದೆ.
ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕವು ಸತತ ಮೂರನೇ ಬಾರಿಗೆ ಪ್ರಥಮ ಸ್ಥಾನ ಗಳಿಸಿದೆ. ಪ್ರಥಮ ಹಾಗೂ ದ್ವಿತೀಯ ಆವಿಷ್ಕಾರ ಸೂಚ್ಯಂಕಗಳನ್ನು ಕ್ರಮವಾಗಿ ಅಕ್ಟೋಬರ್ 2019 ಮತ್ತು ಜನವರಿ 2021ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆವಿಷ್ಕಾರದ ಮೂರನೇ ಆವೃತ್ತಿಯಲ್ಲಿ, ಜಾಗತಿಕ ಆವಿಷ್ಕಾರ ಸೂಚ್ಯಂಕದ ಸಮನಾಗಿ ದೇಶದಲ್ಲಿ ಆವಿಷ್ಕಾರದ ವಿಶ್ಲೇಷಣೆ ಮಾಡುವುದಕ್ಕೆ ಒತ್ತು ನೀಡಲಾಗಿದೆ.
ಆವಿಷ್ಕಾರ ಸೂಚ್ಯಂಕದಲ್ಲಿ ರಾಜ್ಯಗಳ ಸಾಧನೆಯನ್ನು ಲೆಕ್ಕ ಹಾಕಲು 17 ಮುಖ್ಯ ರಾಜ್ಯಗಳು, 10 ಈಶಾನ್ಯ ಹಾಗೂ ಬೆಟ್ಟ ಗುಡ್ಡದ ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರಗಳು ಎಂದು ವಿಂಗಡಿಸಲಾಗಿದೆ.
ಕೋವಿಡ್ ನಂತರದ ಕಾಲಘಟ್ಟದಲ್ಲಿ ಸಿದ್ಧಪಡಿಸಿರುವ ಈ ಸೂಚ್ಯಂಕವನ್ನು ಹಿಂದಿದ್ದ 32 ಸೂಚ್ಯಂಕಗಳ ಬದಲು ಹೊಸದಾಗಿ ಅಳವಡಿಸಿ ಕೊಂಡಿರುವ 66 ಮಾನದಂಡಗಳ ಅನ್ವಯ ಸಿದ್ಧಪಡಿಸಲಾಗಿದೆ. ಇದು ಜಾಗತಿಕ ನಾವೀನ್ಯತಾ ಸೂಚ್ಯಂಕಕ್ಕೆ ಅನುಗುಣವಾಗಿದೆ ಎಂದು ನೀತಿ ಆಯೋಗವು ತಿಳಿಸಿದೆ.
ರಾಜ್ಯದ ಈ ಹ್ಯಾಟ್ರಿಕ್ ಸಾಧನೆಗೆ ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹರ್ಷವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಪ್ರಯಿಕ್ರಿಯಿಸಿರುವ ಅವರು, 'ರಾಜ್ಯದ ಪಾಲಿಗೆ ಇದು ಚಾರಿತ್ರಿಕ ಕ್ಷಣವಾಗಿದೆ.ಜಾಗತಿಕ ಮಾನದಂಡಗಳ ಪ್ರಕಾರವೂ ಕರ್ನಾಟಕವೇ ಅಗ್ರಗಣ್ಯ ನಾವೀನ್ಯತಾ ತಾಣವಾಗಿದೆ ಎನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದ್ದಾರೆ.
ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕದ ವರದಿಯನ್ನು ನೋಡಿ ಮತ್ತಷ್ಟು ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಹಭಾಗಿತ್ವ ಮತ್ತು ನಾವೀನ್ಯತೆಯೇ ನಮ್ಮ ಮುಂದಿನ ಹಾದಿಯಾಗಿದೆ ಎಂದಿದ್ದಾರೆ.
ಇದನ್ನು ಓದಿ:ಗುಜರಾತ್ನಲ್ಲಿ ಆಪ್ ಗೆದ್ದರೆ ಉಚಿತ ವಿದ್ಯುತ್: ಸಿಎಂ ಕೇಜ್ರಿವಾಲ್ ಭರವಸೆ