ಸುಪಾಲ್(ಜಾರ್ಖಂಡ್): ಫೇಸ್ಬುಕ್, ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ತದನಂತರ ಪ್ರೀತಿಯಲ್ಲಿ ಸಿಲುಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನೂರಾರು ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಘಟನೆ ವಿಶೇಷವಾಗಿದೆ. ಇಲ್ಲೊಂದು ಜೋಡಿಗೆ ಕೇವಲ ಮಿಸ್ಡ್ ಕಾಲ್ನಿಂದಲೇ ಪ್ರೇಮಾಂಕುರವಾಗಿದೆ.
ಜಾರ್ಖಂಡ್ನ ರಾಂಚಿಯಲ್ಲಿ ವಾಸವಾಗಿದ್ದ ಯುವತಿ ಗೌರಿ ಹಾಗೂ ಬಿಹಾರದ ಸುಪಾಲ್ ನಿವಾಸಿ ವಿಶೇಷ ಚೇತನ ಯುವಕ ಮುಖೇಶ್ ಎಂಬಿಬ್ಬರ ನಡುವೆ ಪ್ರೀತಿ ಅಂಕುರಿಸಿದೆ. ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಂಚಿಯಲ್ಲಿದ್ದ ಗೌರಿ ಒಂದು ದಿನ ಆಕಸ್ಮಿಕವಾಗಿ(ತಪ್ಪಾಗಿ) ಫೋನ್ ನಂಬರ್ಗೆ ಮಿಸ್ಡ್ ಕಾಲ್ ಮಾಡಿದ್ದಾಳೆ. ಅದು ಬಿಹಾರದ ಸುಪಾಲ್ನಲ್ಲಿ ವಾಸವಾಗಿದ್ದ ಮುಖೇಶ್ ಅವರದ್ದಾಗಿತ್ತು. ಇದಾದ ಬಳಿಕ ಇಬ್ಬರ ನಡುವೆ ಸಂಭಾಷಣೆ ಶುರುವಾಗಿದೆ. ಈ ಸಂಭಾಷಣೆಯಿಂದ ಪರಸ್ಪರ ಸ್ನೇಹಿತರಾದ ಇವರು ಬಳಿಕ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಲು ಶುರು ಮಾಡಿದ್ದಾರೆ. ಈ ವೇಳೆ ಗೌರಿಯೇ ಮೊದಲು ಮದುವೆ ಪ್ರಸ್ತಾಪ ಮಾಡಿದ್ದಳಂತೆ.
ಮುಖೇಶ್ ತಾನೋರ್ವ ದಿವ್ಯಾಂಗ ವ್ಯಕ್ತಿಯಾಗಿದ್ದು ನಿನಗೆ ಒಳ್ಳೆಯ ಹುಡುಗ ಸಿಗಲಿ ಎಂದು ಹೇಳಿದ್ದಾನೆ. ಈ ಮೂಲಕ ಮದುವೆಯನ್ನು ನಿರಾಕರಿಸಿದ್ದನಂತೆ. ಆದರೆ ಯುವಕನ ಮನವಿ ತಿರಸ್ಕರಿಸಿದ ಗೌರಿ ತನ್ನ ಪಟ್ಟುಬಿಡದೆ ರಾಂಚಿಯಿಂದ ಬಿಹಾರದ ಸುಪಾಲ್ಗೆ ಬಂದೇ ಬಿಟ್ಟಿದ್ದಾಳೆ. ಈ ವೇಳೆ ಗೌರಿಯ ಸಹೋದರ ಕೂಡ ಆಕೆಯ ಜೊತೆ ಆಗಮಿಸಿದ್ದಾನೆ. ಇಲ್ಲಿಗೆ ಬಂದ ಮೇಲೆ ಕೋರ್ಟ್ನಲ್ಲಿ ಇಬ್ಬರು ಮದುವೆ ಮಾಡಿಕೊಂಡಿದ್ದಾರೆ. ಮುಖೇಶ್ ಹುಟ್ಟಿನಿಂದಲೂ ಅಂಗವೈಕಲ್ಯ ಹೊಂದಿದ್ದು, ಚಿಕ್ಕವನಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಾನೆ. ಹೀಗಾಗಿ ಚಿಕ್ಕಮ್ಮನೊಂದಿಗೆ ಜೀವನ ನಡೆಸುತ್ತಿದ್ದ ಮುಖೇಶ್ನ ಜೀವನದಲ್ಲಿ ಇದೀಗ ಗೌರಿಯ ಆಗಮನವಾಗಿದೆ.
ಇದನ್ನೂ ಓದಿ: ಪಂದ್ಯ ಸೋತ ಬಳಿಕ ಶ್ರೀಲಂಕಾ ಕ್ಯಾಪ್ಟನ್-ಕೋಚ್ ನಡುವೆ ಮಾತಿನ ಚಕಮಕಿ: ವಿಡಿಯೋ ವೈರಲ್
ಈ ಕುರಿತು ಗೌರಿ ಮಾತನಾಡುತ್ತಾ, "ಕೋರ್ಟ್ನಲ್ಲಿ ಕಾನೂನುಬದ್ಧವಾಗಿ ಮದುವೆ ಮಾಡಿಕೊಂಡಿದ್ದೇವೆ. ಅವರಿಗೆ ದುಡಿಯಲು ಆಗದಿದ್ದರೆ ಏನಂತೆ? ನಾನೇ ಸಂಪಾದನೆ ಮಾಡಿ ಸಾಕುತ್ತೇನೆ" ಎಂದಳು.