ಗುವಾಹಟಿ, ಅಸ್ಸೋಂ: ನಗರದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆದರೆ ಇದು ಹನಿಟ್ರ್ಯಾಪ್ ಪ್ರಕರಣವೋ ಅಥವಾ ಪ್ರೇಮ ಪ್ರಕರಣವೋ ಎಂಬುದು ಪೊಲೀಸರು ತನಿಖೆ ಮೂಲಕ ತಿಳಿದು ಬರಬೇಕಿದೆ. ಈ ಬಗ್ಗೆ ತನಿಖೆ ನಡೆದಿದೆ. ದೂರಿನ ಪ್ರಕಾರ ಈ ಬಾರಿ ಬೇರೆ ರಾಜ್ಯದ ಯುವಕನೊಬ್ಬ ಹನಿ ಟ್ರ್ಯಾಪ್ಗೆ ಸಿಲುಕಿದ್ದಾನೆ ಎಂಬ ಮಾತುಗಳು ಕೇಳಿ ಬಂದಿವೆ. ಭಾನುವಾರ ನಗರದ ಜಯನಗರದ ಪಾರ್ಲೆ ರೆಸಿಡೆನ್ಸಿಯಿಂದ ಸಂತ್ರಸ್ತ ಯುವಕನನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಯುವಕನ ನಿವಾಸ ಜಾರ್ಖಂಡ್‌ನಲ್ಲಿದೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಸಂತ್ರಸ್ತ ಯುವಕ ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಹುಡುಗಿಯೊಬ್ಬಳನ್ನು ಭೇಟಿಯಾಗಿದ್ದನು. ಬಳಿಕ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿದ್ದು, ಇಬ್ಬರೂ ದೆಹಲಿಯಲ್ಲಿ ಲಿವ್ - ಇನ್ ಸಂಬಂಧ ಹೊಂದಿದ್ದ. ದೂರಿನ ಪ್ರಕಾರ, ಯುವತಿ ಕಾಲಕಾಲಕ್ಕೆ ತನ್ನನ್ನು ಮದುವೆಯಾಗುವಂತೆ ಯುವಕನಿಗೆ ಒತ್ತಡ ಹೇರುತ್ತಿದ್ದಳು. ಆದರೆ, ಯುವಕ ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ ಎಂಬ ಆರೋಪವಿದೆ. ನಮ್ಮಿಬ್ಬರ ಸಂಬಂಧ ಕುಟುಂಬಸ್ಥರು ಒಪ್ಪುವುದಿಲ್ಲ, ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹುಡುಗಿಗೆ ಯುವಕ ತಿಳಿಸಿದ್ದಾನೆ.
ಪ್ರೇಮಿಯಿಂದ ಈ ವಿಷಯ ಕೇಳಿದ ಯುವತಿ ನೊಂದುಕೊಂಡಿದ್ದಾಳೆ. ಇದಾದ ನಂತರ ಕಾರಣಾಂತರಗಳಿಂದ ಇಬ್ಬರೂ ಗುವಾಹಟಿಗೆ ಬಂದು ನೆಲೆಸಿದ್ದಾರೆ. ಮದುವೆಯಾಗದ ಕಾರಣ ಯುವತಿ - ಯುವಕನ ಮೇಲೆ ಮಾನಸಿಕವಾಗಿ ಒತ್ತಡ ಹೇರುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಯುವಕನ ಕುಟುಂಬಸ್ಥರು ಯುವತಿ ಮೇಲೆ ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ. ಯುವಕನನ್ನು ಯುವತಿ ದಾರಿ ತಪ್ಪಿಸಿ ಅಸ್ಸೋಂಗೆ ಕರೆತಂದಿದ್ದಾಳೆ. ಬಳಿಕ ಯುವತಿ ಯುವಕನಿಂದ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ ಎಂದು ಯುವಕನ ಕುಟುಂಬಸ್ಥರು ಯುವತಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಆರೋಪಿ ಯುವತಿಗೆ ಹಣ ನೀಡದ ಕಾರಣ ಯುವಕನಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಳು ಎನ್ನಲಾಗಿದೆ. ಯುವತಿಯ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯುವಕ, ‘ದಯವಿಟ್ಟು ಪೋಲಿಸ್ಗೆ ಕರೆ ಮಾಡಿ, ಹೆಲ್ಪ್ ಮಿ, ಸೇವ್ ಮಿ’ ಎಂಬಿತ್ಯಾದಿ ಕಾಗದದ ತುಂಡುಗಳನ್ನು ಬರೆದು ಕಟ್ಟಡದ ಮೇಲಿನಿಂದ ದಾರಿಹೋಕರಿಗೆ ಎಸೆದು ಬೇಡಿಕೊಳ್ಳುತ್ತಿದ್ದ ಎಂಬುದು ಪೊಲೀಸ್ ತನಿಖೆ ಮೂಲಕ ತಿಳಿದುಬಂದಿದೆ.
ಇಡೀ ಘಟನೆಯ ಬಗ್ಗೆ ಬಸಿಷ್ಠ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಇದು ನಿಜಕ್ಕೂ ಹನಿ ಟ್ರ್ಯಾಪಿಂಗ್ ಪ್ರಕರಣವೇ ಅಥವಾ ಇನ್ನೇನಾಗಿದೆ ಎಂಬುದು ಪೊಲೀಸರ ತನಿಖೆಯ ನಂತರವೇ ತಿಳಿದುಬರಲಿದೆ.
ಓದಿ: ನಿಖಿಲ್ ಶೂಟಿಂಗ್ ಸೆಟ್ಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭೇಟಿ... ಅಭಿಮಾನಿಗಳಲ್ಲಿ ಕುತೂಹಲ