ಜಬಲ್ಪುರ( ಮಧ್ಯಪ್ರದೇಶ): ಮಕ್ಕಳನ್ನು ನೋಡಿಕೊಳ್ಳುವ ಆಯಾಗೆ ಹಿಂದಿನ ಕಾಲದಲ್ಲಿ ತಾಯಿಯ ಸ್ಥಾನಮಾನ ನೀಡಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಜೊತೆ ಆಯಾಗಳು ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದ್ದಾರೆ. ನಗರದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಆಯಾ 2 ವರ್ಷದ ಅಮಾಯಕನನ್ನು ಮನಬಂದಂತೆ ಥಳಿಸುತ್ತಿರುವುದು ತಿಳಿದು ಬಂದಿದೆ.
ಕ್ರೌರ್ಯದ ಮಿತಿ ದಾಟಿದ ಆಯಾ!: ಇಲ್ಲಿನ ನಿವಾಸಿ ಮುಖೇಶ್ ವಿಶ್ವಕರ್ಮ ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖೇಶ್ ಅವರ ಪತ್ನಿಯೂ ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಂಪತಿಗೆ ಕೆಲಸದ ಕಾರಣದಿಂದ ಮಗು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ದಂಪತಿ ಸುಮಾರು ಎರಡು ತಿಂಗಳ ಹಿಂದಿನಿಂದಲೂ ತಮ್ಮ ಮಗುವನ್ನು ನೋಡಿಕೊಳ್ಳಲು ರಜನಿ ಚೌಧರಿ ಎಂಬ ಆಯಾಳನ್ನು ನೇಮಿಸಿಕೊಂಡಿದ್ದರು.
ಆಯಾ ರಜನಿ ನಂಬಿಕೆಯ ಮೇಲೆ 2 ವರ್ಷದ ಮಗ ಮಾನ್ವಿಕ್ ಅನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಆಯಾ ಮಗುವಿನೊಂದಿಗೆ ಕ್ರೌರ್ಯದ ಎಲ್ಲ ಮಿತಿಗಳನ್ನು ದಾಟಿದ್ದರು. ಆಯಾ ಅಮಾಯಕ ಮಗುವಿನ ಮೇಲೆ ನಿಷ್ಕರುಣೆಯಿಂದ ಕಪಾಳಮೋಕ್ಷ ಮಾಡಿದ್ದು, ಕೆಲವೊಮ್ಮೆ ಕೂದಲು ಹಿಡಿದು ಎಳೆದಾಡಿದ್ದು, ಕೆಲವೊಮ್ಮೆ ಬಾತ್ ರೂಂನಲ್ಲಿ ಬೀಗ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಗುವಿನ ಕರುಳಿನಲ್ಲಿ ಸೋಂಕು: ಈ ಹೃದಯ ವಿದ್ರಾವಕ ವಿಡಿಯೋದಲ್ಲಿ, ಆಯಾ ಹಸಿದ ಅಮಾಯಕ ಮಗುವಿಗೆ ಕಪಾಳಮೋಕ್ಷ ಮಾಡಿದ ನಂತರ ಬೆನ್ನು ಮತ್ತು ಹೊಟ್ಟೆಗೆ ಬಲವಾಗಿ ಗುದ್ದುವುದನ್ನು ಕಾಣಬಹುದು. ಆಯಾ ಕೆಲವೊಮ್ಮೆ ಅಳುವ ಮಗುವಿನ ಕೂದಲು ಎಳೆದಾಡುತ್ತಾಳೆ. ಹಾಸಿಗೆಯ ಮೇಲೆ ಕುಳಿತ ಅಮಾಯಕ ಮಗುವಿನ ಕತ್ತು ಹಿಸುಕುವುದನ್ನು ಮಾಡುತ್ತಾಳೆ. ಇದರಿಂದ ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು.
ಓದಿ: ಶಿಕ್ಷಕನ ಮಾತಿಗೆ ಎದುರುತ್ತರ ನೀಡಿದ ವಿದ್ಯಾರ್ಥಿ: ಬೆನ್ನ ಮೇಲೆ ಬಿತ್ತು ಬಾಸುಂಡೆ!
ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಪಾಲಕರು: ಮಗುವಿನ ಸ್ಥಿತಿ ಹದಗೆಡುತ್ತಿರುವುದನ್ನು ಕಂಡು ಅನುಮಾನಗೊಂಡ ಮುಖೇಶ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ರಜನಿ ಚೌಧರಿ ತನ್ನ 2 ವರ್ಷದ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ರಜನಿ ಕ್ರೌರ್ಯವನ್ನು ಕಂಡು ಮುಖೇಶ್ ಆಯಾಳನ್ನು ಕೆಲಸದಿಂದ ತೆಗೆದು ಹಾಕಿದ್ದರು. ಬಳಿಕ ರಜನಿ, ತನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಇಡೀ ಕುಟುಂಬದ ವಿರುದ್ಧ ಎಸ್‌ಟಿ/ಎಸ್‌ಸಿ ಕಾಯ್ದೆಯಡಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಳು.
ಆಯಾ ಬೆದರಿಕೆ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ವೈದ್ಯರಿಗೆ ತೋರಿಸಿದ ಬಳಿಕ ಮನೆಯೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆಗ ಆಯಾ ರಜನಿಯ ಕೃತ್ಯ ಈಗ ಬಯಲಾಗಿದೆ. ಅದರಲ್ಲಿ ಆಕೆ ಮುಗ್ಧ ಮಗುವನ್ನು ಹಲವು ರೀತಿಯಲ್ಲಿ ಹಿಂಸಿಸುತ್ತಿರುವುದು ಕಂಡು ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿ ಮುಖೇಶ್ ಮತ್ತು ಅವರ ಪತ್ನಿ ರಜನಿಯೊಂದಿಗೆ ಮಾತನಾಡಿದಾಗ, ಅವರು ಮಗುವನ್ನು ಕೊಲ್ಲುವುದಾಗಿ ಮತ್ತು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದರು ಎಂದು ಮುಖೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಶಾಕ್: ಜಬಲ್ಪುರದ ಮಧೋಟಾಲ್ ಪೊಲೀಸ್ ಠಾಣೆಯಲ್ಲಿ ಆಯಾ ವಿರುದ್ಧ ಮುಖೇಶ್ ದೂರು ದಾಖಲಿಸಿದ್ದಾರೆ. ಆಯಾ ಅವರ ಕ್ರೌರ್ಯದ ಸಿಸಿಟಿವಿ ದೃಶ್ಯಾವಳಿ ನೋಡಿ ಪೊಲೀಸರೂ ಸಹ ಬೆಚ್ಚಿ ಬಿದ್ದಿದ್ದಾರೆ. ಬಳಿಕ ರಜನಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆಯನ್ನು ಬಂಧಿಸಲು ಪೊಲೀಸರು ರಜನಿ ಮನೆಗೆ ತಲುಪಿದಾಗ ಅವರು ಓಡಿಹೋಗಲು ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರು ಆಯಾಳನ್ನು ಸುತ್ತುವರೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಯಾ ಬಂಧಸಿದ ಪೊಲೀಸರು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ಜೈಲಿಗೆ ಕಳುಹಿಸಿದೆ.