ಅಯೋಧ್ಯೆ(ಉತ್ತರ ಪ್ರದೇಶ): ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಅಲ್ಲ ಎಂದು ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ದಾಸ್, "ರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ. ರಾಮನ ಹೆಸರಿನಲ್ಲಿ ಬಿಜೆಪಿ ಹೋರಾಡುತ್ತಿದೆ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು. ನಮ್ಮ ಪ್ರಧಾನಿಯನ್ನು ಎಲ್ಲೆಡೆ ಗೌರವಿಸಲಾಗುತ್ತದೆ. ಅವರು ಅಧಿಕಾರಾವಧಿಯಲ್ಲಿ ಅಪಾರ ಕೆಲಸ ಮಾಡಿದ್ದಾರೆ. ಇದು ರಾಜಕೀಯವಲ್ಲ, ಭಕ್ತಿ" ಎಂದರು.
ಶಿವಸೇನಾ ನಾಯಕ ಸಂಜಯ್ ರಾವತ್, "ರಾಮನನ್ನು ತಮ್ಮ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸುವುದೊಂದೇ ಬಾಕಿ ಇದೆ" ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದಾಸ್, "ಸಂಜಯ್ ರಾವತ್ ಅವರಿಗೆ ಎಷ್ಟು ನೋವಿದೆ ಎಂದರೆ ಅದನ್ನು ಹೇಳಿಕೊಳ್ಳಲೂ ಆಗುತ್ತಿಲ್ಲ. ಅವರು ರಾಮನ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದ್ದವರು. ನಿಜವಾಗಿಯೂ ರಾಮನನ್ನು ನಂಬಿದವರು ಅಧಿಕಾರದಲ್ಲಿದ್ದಾರೆ. ಅವರು ಅಸಂಬದ್ಧವಾಗಿ ಮಾತನಾಡುತ್ತಾ ಶ್ರೀರಾಮನನ್ನು ಅವಮಾನಿಸುತ್ತಿದ್ದಾರೆ" ಎಂದು ತಿಳಿಸಿದರು.
ಭಾನುವಾರ ಸಂಜಯ್ ರಾವುತ್, ಜನವರಿ 22ರಂದು ನಡೆಯುವ ಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನದ ಬಗ್ಗೆ ಟೀಕಿಸುತ್ತಾ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ರಾಮನ ಹೆಸರಿನಲ್ಲಿ ಮತ ಕೇಳುತ್ತದೆ ಎಂದಿದ್ದರು.
"ಪ್ರಧಾನಿ ಕಾರ್ಯಾಲಯ ಮತ್ತು ಸರ್ಕಾರವು ತಮ್ಮ ನೆಲೆಯನ್ನು ಅಯೋಧ್ಯೆಗೆ ಬದಲಾಯಿಸಬೇಕು. ಏಕೆಂದರೆ ಅವರು ರಾಮನ ಹೆಸರಿನಲ್ಲಿ ಮಾತ್ರ ಮತ ಕೇಳುತ್ತಾರೆ. ಅವರು ಅದರ ಹೊರತಾಗಿ ಬೇರೇನೂ ಮಾಡಿಲ್ಲ. ಬಾಳಾಸಾಹೇಬ್ ಠಾಕ್ರೆ ಮತ್ತು ಸಾವಿರಾರು ಶಿವಸೈನಿಕರು ಇದಕ್ಕೆ ಕೊಡುಗೆ ನೀಡಿದ್ದಾರೆ. ನಾವೂ ಸಹ ರಾಮನ ಭಕ್ತರು. ವಾಸ್ತವವಾಗಿ, ನಾವು ರಾಮನ ಅತಿದೊಡ್ಡ ಭಕ್ತರು ಮತ್ತು ನಮ್ಮ ಪಕ್ಷವು ರಾಮ ಮಂದಿರಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ" ಎಂದು ರಾವುತ್ ಹೇಳಿದ್ದರು.
ರಾಮಲಲ್ಲಾ ಪ್ರತಿಷ್ಠಾಪನೆ: ದೇವಾಲಯದ ಅಧಿಕಾರಿಗಳ ಪ್ರಕಾರ, ಅಯೋಧ್ಯೆಯ ರಾಮಮಂದಿರದಲ್ಲಿ ಶಂಕುಸ್ಥಾಪನೆ ಸಮಾರಂಭ ಜನವರಿ 16ರಿಂದ ಏಳು ದಿನಗಳ ಕಾಲ ನಡೆಯಲಿದೆ. ಅಂತಿಮ ದಿನವಾದ ಜನವರಿ 22ರಂದು ಬೆಳಿಗ್ಗೆ ಪೂಜೆಯ ನಂತರ, ಮಧ್ಯಾಹ್ನ 'ಮೃಗಶಿರಾ ನಕ್ಷತ್ರ'ದಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಮೋದಿ ಮೇಲೆ ಹೂ ಸುರಿಸಿದ ಬಾಬರಿ ಮಸೀದಿ ಹೋರಾಟಗಾರ ಇಕ್ಬಾಲ್ ಅನ್ಸಾರಿ