ನವದೆಹಲಿ: ಸಾಂಕ್ರಾಮಿಕ ಕೊರೊನಾವನ್ನು ನಿಯಂತ್ರಿಸಲು ಈಗಾಗಲೇ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳನ್ನು ಕಂಡುಹಿಡಿದು ಚುಚ್ಚುಮದ್ದಾಗಿ ನೀಡಲಾಗುತ್ತಿದೆ. ಭಾರತ್ ಬಯೋಟೆಕ್ ಸಂಸ್ಥೆ ಮೂಗಿನ ಮೂಲಕವೂ ಲಸಿಕೆ ನೀಡುವ ವಿಧಾನವನ್ನು ಕಂಡು ಹಿಡಿದಿದ್ದು, ಇದಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಮೂಲಕ ದೇಶದ ಮೊದಲ ಮೂಗಿನ ಮೂಲಕ ನೀಡುವ ಲಸಿಕೆ ಜನರಿಗೆ ಲಭ್ಯವಾಗಲಿದೆ.
ಮೂಗಿನ ಮೂಲಕ ಕೋವಿಡ್ ಲಸಿಕೆಯನ್ನು ನೀಡುವ ವಿಧಾನವನ್ನು ಭಾರತ್ ಬಯೋಟೆಕ್ ಕಂಡುಕೊಂಡಿದ್ದು, ಇದರ ಅನುಮೋದನೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(ಡಿಸಿಜಿಐ) ಮನವಿ ಮಾಡಿತ್ತು. ಇದರ ತುರ್ತು ಬಳಕೆಗೆ ಡಿಸಿಜಿಐ ಒಪ್ಪಿಗೆ ನೀಡಿದೆ.
ಕೊರೊನಾ ತಡೆಗೆ ನೀಡಲಾಗುವ ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಈಗಾಗಲೇ ದೇಶ, ವಿದೇಶಗಳಿಗೆ ಸರಬರಾಜು ಮಾಡುತ್ತಿದೆ. ಚುಚ್ಚುಮದ್ದು ಮಾದರಿಯಲ್ಲಿ ಇದನ್ನು ನೀಡಲಾಗುತ್ತಿದೆ. ಮೂಗಿನ ಮೂಲಕ ಲಸಿಕೆಯನ್ನು ಹಾಕಿ ಸೋಂಕನ್ನು ಶೀಘ್ರವಾಗಿ ತಡೆಗಟ್ಟುವ ವಿಧಾನವನ್ನು ಭಾರತ್ ಬಯೋಟೆಕ್ ಪರೀಕ್ಷಿಸಿತ್ತು.
ಈ ಪರೀಕ್ಷೆಯಲ್ಲಿ ಲಸಿಕೆಯ ತೀವ್ರತೆ ಯಶಸ್ವಿಯಾಗಿದ್ದು, ದೇಶದ 18 ವರ್ಷ ಮೇಲಿನ ಎಲ್ಲ ನಾಗರಿಕರಿಗೆ ಮೂಗಿನ ಮೂಲಕ ಲಸಿಕೆಯನ್ನು ನೀಡಲು ಅನುಮೋದಿಸಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದು, ದೇಶದ ಮೊದಲ ಇಂಟ್ರಾನಾಸಲ್ ಲಸಿಕೆಗೆ ಡಿಸಿಜಿಐ ಅನುಮತಿ ನೀಡಿದೆ. ಇದು ಕೋವಿಡ್ ವಿರುದ್ಧದ ಹೋರಾಟಕ್ಕೆ ದೊರೆತ ಮತ್ತೊಂದು ದೊಡ್ಡ ಉತ್ತೇಜನವಾಗಿದೆ. ಭಾರತ್ ಬಯೋಟೆಕ್‌ನ ChAd36-SARS-CoV-S COVID-19 ಮೂಗಿನ ಲಸಿಕೆಯನ್ನು ದೇಶದ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಲಭ್ಯವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಮೂಗಿನ ಮೂಲಕ ನೀಡುವ ಲಸಿಕೆಯನ್ನು 4 ಸಾವಿರ ಜನರ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಇದುವರೆಗೆ ಯಾವುದೇ ಅಡ್ಡ ಅಥವಾ ಪ್ರತಿಕೂಲ ಪರಿಣಾಮ ಬೀರಿದ ವರದಿಯಾಗಿಲ್ಲ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಓದಿ: ದೀರ್ಘಕಾಲದ ಕೋವಿಡ್ನಿಂದ ಹೃದಯಾಘಾತ, ಪಾರ್ಶ್ವವಾಯು ಹೆಚ್ಚಳ: ಅಧ್ಯಯನ ವರದಿ