ನವದೆಹಲಿ: ಭಾರತದಲ್ಲಿ ಕಳೆದ 2 ತಿಂಗಳಿಂದ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಪಶ್ಚಿಮ ಬಂಗಾಳ, ಅಸ್ಸೋಂ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ದಸರಾ ಹಬ್ಬದ ನಂತರ ವರದಿಯಾಗುತ್ತಿರುವ ಪ್ರಕರಣಗಳು ಶೇ.40ರಷ್ಟು ಹೆಚ್ಚಾಗಿದ್ದು, ಮೂರನೇ ಅಲೆಯ ಭೀತಿ ಶುರುವಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 12,428 ಸೋಂಕಿತರು ಪತ್ತೆಯಾಗಿದ್ದು, 356 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ದೇಶದ ಒಟ್ಟು ಕೇಸ್ಗಳ ಸಂಖ್ಯೆ 3,41,89,774 ಹಾಗೂ ಮೃತರ ಸಂಖ್ಯೆ 4,54,712ಕ್ಕೆ ಏರಿಕೆಯಾಗಿದೆ. ಗುಣಮುಖರ ಪ್ರಮಾಣ ಶೇ.96.18ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣ ಪ್ರಮಾಣ ಶೇ.0.49ಕ್ಕೆ ಇಳಿಕೆಯಾಗಿದೆ. ಸದ್ಯ 1,63,816 ಕೇಸ್ಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
102.94 ಕೋಟಿ ಡೋಸ್ ವ್ಯಾಕ್ಸಿನೇಷನ್
ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಅಕ್ಟೋಬರ್ 21ಕ್ಕೆ ನೂರು ಕೋಟಿ ಡೋಸ್ ಲಸಿಕೆ ವಿತರಿಸಿ ಭಾರತ ಇತಿಹಾಸ ಬರೆದಿತ್ತು. ಇಲ್ಲಿಯವರೆಗೂ 102.94 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ಅನ್ನು ಜನರು ಪಡೆದಿದ್ದಾರೆ.
ವಿಶ್ವದಲ್ಲಿ 244 ಮಿಲಿಯನ್ ಸೋಂಕಿತರು
ಪ್ರಪಂಚಾದ್ಯಂತ ಈವರೆಗೆ 244 ಮಿಲಿಯನ್ ಜನರಿಗೆ ವೈರಸ್ ಅಂಟಿದ್ದು, 4.95 ಮಿಲಿಯನ್ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.