ಮೊರೆನಾ (ಮಧ್ಯಪ್ರದೇಶ)/ಜೈಪುರ (ರಾಜಸ್ಥಾನ): ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯಪ್ರದೇಶದ ಚಂಬಲ್ ಪ್ರದೇಶದ ಕ್ವಾರ್ರಿ ಮತ್ತು ಚಂಬಲ್ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀರಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಚಂಬಲ್ ನದಿಗೆ ಸಮಾನವಾಗಿ ಕ್ವಾರಿ ನದಿ ನೀರಿನ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ 10 ಮೀಟರ್ ಏರಿಕೆಯಾಗಿರುವುದು 1971ರ ನಂತರ ಇದೇ ಮೊದಲು ಸಲವಾಗಿದೆಯಂತೆ. ನದಿಗಳಿಗೆ ಸಮೀಪವಿರುವ ನೂರಾರು ಗ್ರಾಮಗಳನ್ನು ಈಗ ಸ್ಥಳಾಂತರಿಸಲಾಗಿದ್ದು, ಗ್ರಾಮಸ್ಥರನ್ನು ಟ್ರ್ಯಾಕ್ಟರ್ ಟ್ಯೂಬ್‌ಗಳ ಸಹಾಯದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಹೆಲಿಕಾಪ್ಟರ್ ಬಳಸಿ ಏರ್ ಲಿಫ್ಟ್:
ಮೊರೆನಾದಲ್ಲಿ ಏಳು ಜನರನ್ನು ಸೇನೆಯು ಹೆಲಿಕಾಪ್ಟರ್ ಬಳಸಿ ಏರ್ ಲಿಫ್ಟ್ ಮಾಡಿತು. ಅಲ್ಲದೇ, ಗ್ವಾಲಿಯರ್-ಚಂಬಲ್ ಪ್ರದೇಶ, ವಿಶೇಷವಾಗಿ ಶಿಯೋಪುರ್ ಮತ್ತು ಶಿವಪುರಿ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. ದಾತಿಯಾ ಜಿಲ್ಲೆಯ ರತಂಗರ್ ಗ್ರಾಮದಲ್ಲಿ ಸಿಂಧ್ ನದಿಯಿಂದ ಉಂಟಾದ ಪ್ರಬಲವಾದ ಪ್ರವಾಹದಿಂದಾಗಿ ಸೇತುವೆ ಕೊಚ್ಚಿಹೋಗಿದೆ.
ಬುಧವಾರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 1000ಕ್ಕೂ ಹೆಚ್ಚು ಜನರನ್ನು ಪ್ರವಾಹ ಪೀಡಿತ ಶಿಯೋಪುರ್ ಗ್ರಾಮದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕ್ವಾರ್ರಿ, ಸೀಪ್ ಮತ್ತು ಪಾರ್ವತಿ ನದಿಗಳಲ್ಲಿನ ಪ್ರವಾಹದಿಂದ ಶಿಯೋಪುರದ 30 ಗ್ರಾಮಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದರು.
"ಶಿಯೋಪುರದ 30 ಹಳ್ಳಿಗಳು ಪ್ರವಾಹ ಪೀಡಿತವಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಇಲ್ಲಿಯವರೆಗೆ 1000ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಜ್ವಾಲಾಪುರ ಗ್ರಾಮದಲ್ಲಿ ಸಿಲುಕಿರುವ 1000 ಜನರನ್ನು ರಕ್ಷಿಸುವ ಕಅರ್ಯ ನಡೆಯುತ್ತಿದೆ." ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ದಾತಿಯ ಪಾಲಿ ಗ್ರಾಮದಲ್ಲಿ ಸಿಕ್ಕಿಬಿದ್ದ 17 ಜನರನ್ನು ಮತ್ತು ಶಿವಪುರಿಯ ಕಾಳಿ ಪಹರಿಯಲ್ಲಿದ್ದ 20 ಜನರನ್ನು ಸೇನೆಯು ರಕ್ಷಿಸಿದೆ ಎಂದು ಚೌಹಾಣ್ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) 11 ಜನರನ್ನು ತಪಕೇಶ್ವರ ದೇವಸ್ಥಾನದಿಂದ ರಕ್ಷಿಸಿದೆ. ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿದರು.
ರಾಜಸ್ಥಾನದಲ್ಲೂ ಮಳೆಯಿಂದಾಗಿ ಪ್ರವಾಹ:
ಇನ್ನು ರಾಜಸ್ಥಾನದ ಹದೌತಿ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, 100ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಅನಾಹುತ ಪ್ರತಿಕ್ರಿಯೆ ಪಡೆ (NDRF) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ (SDRF) ತಂಡಗಳಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸಲಾಗುತ್ತಿದೆ ಮತ್ತು ಅಗತ್ಯವಿದ್ದಲ್ಲಿ ಭಾರತೀಯ ಸೇನೆಯ ಸಹಾಯ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
"ಭಾರೀ ಮಳೆಯಿಂದ ಕೋಟ, ಬಾರನ್, ಬಂಡಿ ಮತ್ತು ಜಲಾವರದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ" ಎಂದು ಗೆಹ್ಲೋಟ್ ಬುಧವಾರ ಟ್ವೀಟ್ ಮಾಡಿದ್ದಾರೆ. ಧೋಲ್ಪುರದಲ್ಲಿ ಚಂಬಲ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭರತಪುರದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಧೋಲ್ಪುರ್ ಮತ್ತು ಭರತ್‌ಪುರ ಜಿಲ್ಲೆಗಳಲ್ಲಿ ಸ್ಥಳೀಯಾಡಳಿತವನ್ನು ಎಚ್ಚರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಬಂಗಾಳದಲ್ಲೂ ವರುಣನ ಆರ್ಭಟ
ಇನ್ನು ಪಶ್ಚಿಮ ಬಂಗಾಳದಲ್ಲೂ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಲವು ಜಿಲ್ಲೆಗಳಿಲ್ಲ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಗೆ 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂಬ ವರದಿ ಇದೆ. ಈ ನಡುವೆ ಸಿಎಂ ಮಮತಾ ಬ್ಯಾನರ್ಜಿ ಮಳೆಯಲ್ಲೇ ಕೊಡೆ ಹಿಡಿದು ಪ್ರವಾಹ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
ಮಳೆ ಮುಂದುವರಿಯುವ ಸಾಧ್ಯತೆ:
ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಪೂರ್ವ ಭಾಗದ ಹಲವು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗಿದೆ. ಈ ಪ್ರದೇಶದ 100ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬರಾನ್ ಮತ್ತು ಸಮೀಪದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಎಸ್‌ಡಿಆರ್‌ಎಫ್ ಕಮಾಂಡೆಂಟ್ ಪಂಕಜ್ ಚೌಧರಿ ಅವರು ತಮ್ಮ ತಂಡಗಳನ್ನು ಬರನ್, ಧೋಲ್ಪುರ್, ಸವಾಯಿ ಮಾಧೋಪುರ ಮತ್ತು ಕರೌಲಿಯಂತಹ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ ಎಂದು ಹೇಳಿದರು.
ಬರಾನ್, ಸವಾಯಿ ಮಾಧೋಪುರ್, ಕೋಟ ಮತ್ತು ಬುಂಡಿಯ ಹಲವು ಪ್ರದೇಶಗಳು ಬುಧವಾರ ಬೆಳಗಿನವರೆಗೆ ಭಾರಿ ಮಳೆಯಾಗಿದ್ದು, ಇತರ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಖಟೋಲಿಯಲ್ಲಿ (ಕೋಟ) ಅತಿ ಹೆಚ್ಚು ಅಂದರೆ 280 ಮಿಮೀ ಮಳೆಯಾಗಿದ್ದು, ನಂತರ ಬುಂಡಿಯಲ್ಲಿ 258 ಮಿಮೀ ಮಳೆಯಾಗಿದೆ. ಪೂರ್ವ ರಾಜಸ್ಥಾನ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಬುಧವಾರ ಮತ್ತು ಗುರುವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.