ನವದೆಹಲಿ : ರೋಹಿಂಗ್ಯಾ ವಲಸಿಗರು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುತ್ತಿದ್ದು, ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ವರದಿಗಳಿವೆ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವರಾದ ನಿತ್ಯಾನಂದ್ ರಾಯ್ ಲೋಕಸಭೆಗೆ ಮಾಹಿತಿ ನೀಡಿದರು.
ಮಂಗಳವಾರ ಲೋಕಸಭೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಸದಸ್ಯ ರಿತೇಶ್ ಪಾಂಡೆ ಅವರ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ನಿತ್ಯಾನಂದ್ ರಾಯ್ ಲಿಖಿತ ಉತ್ತರ ನೀಡಿದ್ದು, ರೋಹಿಂಗ್ಯಾಗಳು ರಾಷ್ಟ್ರಕ್ಕೆ ಬೆದರಿಕೆ ಎಂದಿದ್ದಾರೆ.
ರೋಹಿಂಗ್ಯಾಗಳನ್ನು ಭಾರತದಿಂದ ಗಡಿಪಾರು ಮಾಡದಂತೆ ಸುಪ್ರೀಂಕೋರ್ಟ್ನಲ್ಲಿ ರಿಟ್ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಆದರೆ, ರೋಹಿಂಗ್ಯಾಗಳನ್ನು ಗಡಿಪಾರು ಮಾಡದಂತೆ ನ್ಯಾಯಾಲಯ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದು ನಿತ್ಯಾನಂದ್ ರಾಯ್ ಸ್ಪಷ್ಟನೆ ನೀಡಿದರು.
ನಿರಾಶ್ರಿತರ ಸ್ಥಿತಿಗೆ ಸಂಬಂಧಿಸಿದಂತೆ 1967ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಸಹಿ ಹಾಕಿಲ್ಲ. ವಿದೇಶಿ ಪ್ರಜೆಗಳು ಮತ್ತು ವಿದೇಶಿಯರ ಕಾಯ್ದೆ-1946, ವಿದೇಶಿಯರ ನೋಂದಣಿ ಕಾಯ್ದೆ-1939, ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ-1920 ಮತ್ತು ಪೌರತ್ವ ಕಾಯ್ದೆ- 1955 ಮುಂತಾದವುಗಳು ವಿದೇಶಿಗರನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ ಎಂದು ನಿತ್ಯಾನಂದ್ ರಾಯ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಆಡಳಿತ ಪಕ್ಷದೊಂದಿಗೆ ಕೈ ಜೋಡಿಸಿದ ವಿಪಕ್ಷ; ನಾಗಾಲ್ಯಾಂಡ್ನಲ್ಲೀಗ ವಿರೋಧ ಪಕ್ಷವೇ ಇಲ್ಲ
ಪ್ರಯಾಣದ ದಾಖಲೆಗಳಿಲ್ಲದೆ ದೇಶಕ್ಕೆ ಪ್ರವೇಶಿಸುವ ವಿದೇಶಿ ಪ್ರಜೆಗಳು ಅಥವಾ ಅವಧಿ ಮೀರಿದರೂ ಭಾರತದಲ್ಲಿ ಉಳಿದುಕೊಂಡಿರುವ ವಲಸಿಗರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುತ್ತದೆ. ಇವರ ವಿರುದ್ಧ ಕಾನೂನುರೀತ್ಯಾ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.