ಹೈದರಾಬಾದ್ (ತೆಲಂಗಾಣ): ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮದ ಭದ್ರತಾ ಪರಿಶೀಲನೆ ವೇಳೆ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಆಕಸ್ಮಿಕವಾಗಿ ಕೆಳಗಡೆ ಬಿದ್ದು ಮೃತಪಟ್ಟಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ನಡೆದಿದೆ. 51 ವರ್ಷದ ಕುಮಾರ್.ಎ ಎಂಬುವರೇ ಮೃತ ಅಧಿಕಾರಿ.
ಇಲ್ಲಿನ ಆಡಿಟೋರಿಯಂವೊಂದರಲ್ಲಿ ಮೇ 20ರಂದು ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರ ಗುಪ್ತಚರ ಇಲಾಖೆ ಮತ್ತು ರಾಜ್ಯ ಪೊಲೀಸ್ ಇಲಾಖೆಯ ಗುಪ್ತಚರ ಭದ್ರತಾ ಘಟಕದ ಅಧಿಕಾರಿಗಳ ತಂಡ ಕಾರ್ಯಕ್ರಮದ ಭದ್ರತೆ ಪರಿಶೀಲನೆ ನಡೆಸುತ್ತಿತ್ತು. ಈ ವೇಳೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಯಾದ ಕುಮಾರ್ ಸಹ ಆಡಿಟೋರಿಯಂನ ಫೋಟೋಗಳನ್ನು ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲಿಂದ ಕಾಲು ಜಾರಿ ಅವರು ಕೆಳಗಡೆ ಬಿದ್ದಿದ್ದಾರೆ.
ಆಕಸ್ಮಿಕವಾಗಿ ಬಿದ್ದ ಪರಿಣಾಮ ಅವರ ತಲೆಗೆ ಭಾರಿ ಪೆಟ್ಟಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾರೆ. ವೇದಿಕೆ ಮೇಲಿಂದ ಅವರು ಕೆಳಗಡೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವರು ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಇತರೆ ಅಧಿಕಾರಿಗಳು ರಕ್ಷಣೆಗೆ ಧಾವಿಸಿರುವ ದೃಶ್ಯ ಸಹ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಮೃತ ಕುಮಾರ್ ಮೂಲತಃ ಬಿಹಾರ ಮೂಲದವರಾಗಿದ್ದು, ಇವರ ಸಾವಿನ ಸುದ್ದಿ ತಿಳಿದು ವೆಂಕಯ್ಯ ನಾಯ್ಡು ಸಂತಾಪ ಸೂಚಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪತ್ನಿಗೆ ಕಿರುಕುಳ: ರಾಘವೇಂದ್ರ ಚನ್ನಣ್ಣನವರ್ ವಿರುದ್ಧ ಎಫ್ಐಆರ್