ಮುಂಬೈ: ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ನ್ಯಾಯಾಲಯವು ಮುಂದಿನ ವಿಚಾರಣೆ ನಡೆಸುವವರೆಗೆ ಟ್ವೀಟ್ ಮಾಡುವುದಿಲ್ಲ ಎಂದು ಮಹಾರಾಷ್ಟ್ರದ ಅಲ್ಪಸಂಖ್ಯಾತ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ನವಾಬ್ ಮಲಿಕ್ ಹೇಳಿದ್ದಾರೆ. ಈ ಮೂಲಕ ಸುದೀರ್ಘ ಕಲಹಕ್ಕೆ ಪೂರ್ಣ ವಿರಾಮ ಇಟ್ಟಂತಾಗಿದೆ.
ಜಾತಿ ಪರಿಶೀಲನಾ ಸಮಿತಿಯನ್ನು ಸಂಪರ್ಕಿಸದೆ ಮಾಧ್ಯಮಗಳಲ್ಲಿ ವಾಂಖೆಡೆ ಅವರ ಜಾತಿ ಪ್ರಮಾಣಪತ್ರದ ಬಗ್ಗೆ ಆರೋಪ ಮಾಡಿದ್ದಕ್ಕಾಗಿ ನ್ಯಾಯಾಲಯವು ನವಾಬ್ ಮಲಿಕ್ ಅವರನ್ನು ಖಂಡಿಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.
ಮೊನ್ನೆ ಸಮೀರ್ ವಾಂಖೆಡೆ ಅವರ ತಾಯಿಯ ಮರಣ ಪ್ರಮಾಣಪತ್ರವನ್ನು ಹಂಚಿಕೊಂಡ ಮಲಿಕ್, ಎನ್‌ಸಿಬಿ ಅಧಿಕಾರಿಯು ನಕಲಿ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಜಾಹಿದಾ ದಾವೂದ್ ವಾಂಖೆಡೆಯವರ ಎರಡು ಮರಣ ಪ್ರಮಾಣಪತ್ರಗಳಿವೆ, ಪ್ರತಿಯೊಂದೂ ವಿಭಿನ್ನ ಧರ್ಮಗಳನ್ನು ಉಲ್ಲೇಖಿಸುತ್ತದೆ ಎಂದು ಹೇಳಿದ್ದ ಅವರು ಎರಡೂ ಮರಣ ಪ್ರಮಾಣಪತ್ರಗಳನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದರು.
ಇನ್ನು ಸಮೀರ್ ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ ಅವರು ನವಾಬ್ ಮಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅವರು ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ತಮ್ಮ ಕುಟುಂಬವನ್ನು ಮಾನಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ತಮ್ಮ ಕುಟುಂಬದ ಮಾಹಿತಿಯನ್ನು ಪ್ರಚಾರ ಮಾಡುವ ಮೂಲಕ ಮಲಿಕ್ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದೂ ಅವರು ದಾವೆಯಲ್ಲಿ ಉಲ್ಲೇಖಿಸಿದ್ದರು.