ನವದೆಹಲಿ: ದೆಹಲಿಯ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಗೋವಿಂದ್ ವಲ್ಲಭ್ ಪಂತ್ ಇನ್ಸ್ಟಿಟ್ಯೂಟ್ (ಜಿಐಪಿಎಂಇಆರ್) ತನ್ನ ಎಲ್ಲಾ ಶುಶ್ರೂಷಾ ಸಿಬ್ಬಂದಿಗೆ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬಳಸಬೇಕು, ಮಲಯಾಳಂನಲ್ಲಿ ಮಾತನಾಡಬಾರದು ಎಂಬ ಆದೇಶವನ್ನು ಹಿಂತೆಗೆದುಕೊಂಡಿದೆ.
ಕೆಲಸದಲ್ಲಿ ಸಂವಹನಕ್ಕಾಗಿ ಇಂಗ್ಲಿಷ್ ಅಥವಾ ಹಿಂದಿಯನ್ನು ಮಾತ್ರ ಬಳಸುವಂತೆ ಆಸ್ಪತ್ರೆಯು ದಾದಿಯರಿಗೆ ಸೂಚನೆ ನೀಡಿತ್ತು. ಇದಕ್ಕೆ ರಾಷ್ಟ್ರ ರಾಜಕೀಯ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಕೇರಳ ದಾದಿಯರಿಗೆ ಹಿಂದಿ/ಇಂಗ್ಲಿಷ್‌ನಲ್ಲಿ ಮಾತನಾಡಲು ದೆಹಲಿ ಆಸ್ಪತ್ರೆ ಆದೇಶ: ಕೈ ನಾಯಕರ ಆಕ್ರೋಶ
ಮಲಯಾಳಂ ಭಾಷೆಯ ಬಳಕೆಯ ವಿರುದ್ಧ ಜಿಐಪಿಎಂಇಆರ್ಗೆ ದೂರು ಬಂದಿದೆ. ಜಿಐಪಿಎಂಇಆರ್ನಲ್ಲಿ ಕೆಲಸದ ಸ್ಥಳಗಳಲ್ಲಿ ಸಂವಹನಕ್ಕಾಗಿ ಮಲಯಾಳಂ ಭಾಷೆಯನ್ನು ಬಳಸಲಾಗುತ್ತಿದೆ ಎಂಬ ಬಗ್ಗೆ ದೂರು ಬಂದಿದೆ. ಆದರೆ ಗರಿಷ್ಠ ರೋಗಿಗಳು ಮತ್ತು ಸಹೋದ್ಯೋಗಿಗಳು ಈ ಭಾಷೆಯನ್ನು ತಿಳಿದಿಲ್ಲ. ಇದರಿಂದ ಸಾಕಷ್ಟು ಅನಾನುಕೂಲತೆಗಳು ಉಂಟಾಗುತ್ತವೆ. ಆದ್ದರಿಂದ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಬಳಸುವಂತೆ ಎಲ್ಲಾ ನರ್ಸಿಂಗ್ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ. ಇಲ್ಲದಿದ್ದರೆ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಈ ಹಿಂದೆ ಜಿಐಪಿಎಂಇಆರ್ ಸುತ್ತೋಲೆ ಹೊರಡಿಸಿತ್ತು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದರಾದ ಕೆ.ಸಿ.ವೇಣುಗೋಪಾಲ್, ಶಶಿ ತರೂರ್ ಇದಕ್ಕೆ ತಮ್ಮ ಟ್ವಿಟರ್ನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ಮಲಯಾಳಂ ಸಹ ಭಾರತೀಯ ಭಾಷೆ, ತಾರತಮ್ಯ ನಿಲ್ಲಿಸಿ: ರಾಹುಲ್ ಗಾಂಧಿ