ಉತ್ತರ ಪ್ರದೇಶ: ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಶಾಸಕ ವಿಜಯ್ ಮಿಶ್ರಾ ಅವರ ಮನೆ ತೆರವುಗೊಳಿಸುವ ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ಹಿಡಿದಿದೆ.ಈ ಹಿಂದೆ ಕೋರ್ಟ್ ಆದೇಶ ನೀಡಿದ 15 ನಿಮಿಷಗಳ ಬಳಿಕವಷ್ಟೇ ಮನೆ ತೆರವಿಗೆ ಸರ್ಕಾರ ಮುಂದಾಗಿತ್ತು. ಶಾಸಕರಿಗೆ ಮರು ಪ್ರಶ್ನಿಸಲು ಸಹ ಸಮಯಾವಕಾಶ ನೀಡಿಲ್ಲ ಎಂದು ವಿಜಯ್ ಮಿಶ್ರ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿ ಪುರಸ್ಕರಿಸಿದ ಕೋರ್ಟ್ ಮಿಶ್ರಾ ಮನೆ ತೆರವಿಗೆ ತಡೆ ನೀಡಿದೆ. ಅಲ್ಲದೆ ಇನ್ನೆರಡು ವಾರದೊಳಗೆ ಅರ್ಜಿಗೆ ಉತ್ತರಿಸುವಂತೆ ರಾಜ್ಯ ಸರ್ಕಾರ ಹಾಗೂ ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ.
ಕೋರ್ಟ್ ನವೆಂಬರ್ 5ರಂದು ಮನೆ ತೆರವಿಗೆ ಆದೇಶ ನೀಡಿದ ಕೇವಲ 15 ನಿಮಿಷದಲ್ಲಿಯೇ ಸ್ಥಳೀಯ ಆಡಳಿತ ಮನೆ ತೆರವಿಗೆ ಆಗಮಿಸಿತ್ತು. ಶಾಸಕರಿಗೆ ಈ ಆದೇಶದ ವಿರುದ್ಧ ಪ್ರಶ್ನಿಸಲು ಅವಕಾಶ ಸಹ ನೀಡಲಿಲ್ಲ ಎಂದು ಅರ್ಜಿದಾರರ ಪರ ವಕೀಲರಾದ ಲೋಕೇಶ್ ಕುಮಾರ್ ದ್ವಿವೇದಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಈ ಮನೆಯು ಇಂದ್ರಕಾಲಿ ಮತ್ತು ರಾಮ್ಲಾಲಿ ಎಂಬ ಇಬ್ಬರ ಹೆಸರಲ್ಲೂ ನೋಂದಣಿಯಾಗಿದೆ. ಆದರೆ ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರ ಒಬ್ಬರಿಗೆ ಮಾತ್ರ ನೋಟಿಸ್ ನೀಡಿದೆ.
ಮೂಲ ಮಾಲಿಕರು ಫೆಬ್ರವರಿ 3, 1980ರಲ್ಲಿಯೇ ಮನೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರು. ಅನುಮೋದಿತ ನಕ್ಷೆಯ ವಿರುದ್ಧವಾಗಿ ಮನೆಯ ರಚನೆ ಇದ್ದರೆ ತಾವಾಗಿಯೇ ಅದನ್ನು ತೆರವುಗೊಳಿಸುವುದಾಗಿ ಅರ್ಜಿದಾರರು ತಿಳಿಸಿದ್ದರು.
ಇನ್ನು ವಿಜಯ್ ಮಿಶ್ರಾ ನಿರ್ಬಲ್ ಇಂಡಿಯನ್ ಶೋಶಿತ್ ಹಮಾರಾ ಆಮ್ ದಳ (NISHAD) ಪಕ್ಷದಿಂದ ಸ್ವರ್ಧಿಸಿ 2017ರಲ್ಲಿ ಗ್ಯಾನ್ಪುರ್ ಕ್ಷೇತ್ರದಿಂದ ಭರ್ಜರಿ ಜಯ ದಾಖಲಿಸಿದ್ದರು.