ನವದೆಹಲಿ: ಉದ್ಯೋಗ ಕಡಿತ ಮತ್ತು ಹೊಸ ನೇಮಕಾತಿಗಳಲ್ಲಿ ನಿಧಾನಗತಿಯನ್ನು ಅನುಸರಿಸುವ ಮೂಲಕ ತಮ್ಮ ಆದಾಯದ ಮಟ್ಟವನ್ನು ಕಂಪನಿಗಳು ಸ್ಥಿರವಾಗಿಡಲು ಪ್ರಯತ್ನಿಸುತ್ತಿವೆ. ಈ ಮಧ್ಯೆ ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿ ಗೂಗಲ್ ಹೊಸ ಕಾರ್ಯಕ್ಷಮತೆ ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಿದೆ. ಇದು ಕಳಪೆ ಉದ್ಯೋಗಿಗಳನ್ನು ಹೊರಹಾಕಲು ಅಳವಡಿಸಲಾದ ವ್ಯವಸ್ಥೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಮುಂದಿನ ವರ್ಷಾರಂಭದಲ್ಲಿ ಹೊಸ ಕಾರ್ಯಕ್ಷಮತೆ ನಿರ್ವಹಣಾ ವ್ಯವಸ್ಥೆ ಜಾರಿಯಾದ ನಂತರ, ಗೂಗಲ್ನಲ್ಲಿರುವ ಕಳಪೆಯಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊರಹಾಕಲು ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಿಗೆ ಈ ವ್ಯವಸ್ಥೆ ಸಹಾಯ ಮಾಡಲಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ ಕಳಪೆ ಕಾರ್ಯಕ್ಷಮತೆಯ ಉದ್ಯೋಗಿಗಳಿಗೆ ಬೋನಸ್ ಮತ್ತು ಸ್ಟಾಕ್ಸ್ ನೀಡುವ ಸೌಲಭ್ಯಗಳನ್ನು ತಡೆಹಿಡಿಯಲು ಕೂಡ ಹೊಸ ವ್ಯವಸ್ಥೆ ಸಹಾಯಕವಾಗಲಿದೆ.
ಹೊಸ ವ್ಯವಸ್ಥೆಯ ಪ್ರಕಾರ, ವ್ಯವಹಾರದ ದೃಷ್ಟಿಯಿಂದ ಶೇ 6 ರಷ್ಟು ಅಥವಾ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕಳಪೆ ಕಾರ್ಯಕ್ಷಮತೆಯ ಉದ್ಯೋಗಿಗಳೆಂದು ವರ್ಗೀಕರಿಸುವಂತೆ ಮ್ಯಾನೇಜರುಗಳಿಗೆ ಸೂಚಿಸಲಾಗಿದೆಯಂತೆ.
ಹಿಂದಿನ ಕಾರ್ಯಕ್ಷಮತೆ ಪರಿಶೀಲನಾ ವ್ಯವಸ್ಥೆಯಲ್ಲಿ, ಮ್ಯಾನೇಜರುಗಳು ಶೇಕಡಾ 2 ರಷ್ಟು ಉದ್ಯೋಗಿಗಳನ್ನು ಆ ಗುಂಪಿಗೆ ಸೇರಿಸಬೇಕೆಂದು ನಿರೀಕ್ಷಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಇತ್ತೀಚೆಗೆ ಕೆಲವು ಜಾಗತಿಕ ದೈತ್ಯ ಟೆಕ್ನಾಲಜಿ ಕಂಪನಿಗಳಾದ ಅಮೆಜಾನ್, ಟ್ವಿಟರ್ ಮತ್ತು ಮೆಟಾ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ.
ಇದನ್ನೂ ಓದಿ: ಗಾರ್ಮೆಂಟ್ಸ್ ಉದ್ಯೋಗ ಕಡಿತ, ಜೀವನ ನಡೆಸಲು ದುಡ್ಡಿಲ್ಲ; ನೇಣಿಗೆ ಕೊರಳೊಡ್ಡಿದ್ಲು ಯುವತಿ