ನವದೆಹಲಿ: ಪೂರ್ವ ದೆಹಲಿಯ ಹೂವಿನ ಮಾರುಕಟ್ಟೆಯೊಂದರಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದ ಚೀಲದಲ್ಲಿ ಸುಧಾರಿತ ಸ್ಫೋಟಕ ಪತ್ತೆಯಾಗಿದ್ದು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಭದ್ರತಾ ಸಂಸ್ಥೆಗಳು ಎಚ್ಚೆತ್ತುಕೊಂಡಿವೆ.
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಮುನ್ಸೂಚನೆ ಸಿಕ್ಕಿರುವ ಬೆನ್ನಲ್ಲೇ ಗಾಜಿಪುರ ಪ್ರದೇಶದಲ್ಲಿನ ಹೂವಿನ ಮಾರುಕಟ್ಟೆಯಲ್ಲಿ ಶಂಕಾಸ್ಪದ ಬಾಂಬ್ ಪತ್ತೆಯಾಗಿದ್ದು, ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಗಣರಾಜ್ಯೋತ್ಸವ ಪರೇಡ್ಗೂ ಮುನ್ನವೇ ಬಾಂಬ್ ಸ್ಫೋಟಗೊಳಿಸಲು ಸಂಚು ರೂಪಿಸಲಾಗಿತ್ತು ಎಂಬುದು ಇದೀಗ ತಿಳಿದು ಬಂದಿದೆ. ಆದರೆ ಜನರ ಜಾಗೃತಿಯಿಂದ ದಾಳಿ ವಿಫಲಗೊಂಡಿದ್ದು, ಇದೀಗ ಎಲ್ಲ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ.
ಇದನ್ನೂ ಓದಿ: ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಕ್ಕೆ ಸಿಕ್ತು ಕಾರಣ!: ತನಿಖಾ ವರದಿಯಿಂದ ಬಹಿರಂಗ
ಪೊಲೀಸ್, ಎನ್‌ಎಸ್‌ಜಿ ಕಾರ್ಯಕ್ಕೆ ಗಂಭೀರ್ ಶ್ಲಾಘನೆ
ಐಇಡಿ ಬಾಂಬ್ ಪತ್ತೆಯಾದ ಸ್ಥಳಕ್ಕೆ ತೆರಳಿ ಬಾಂಬ್ ನಿಷ್ಕ್ರಿಯಗೊಳಿಸಿರುವ ದೆಹಲಿ ಪೊಲೀಸರು ಹಾಗೂ ಎನ್ಎಸ್ಜಿಗೆ ಸಂಸದ ಗೌತಮ್ ಗಂಭೀರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗಣರಾಜ್ಯೋತ್ಸವಕ್ಕೂ ಮುಂಚಿತವಾಗಿ ಬಹುದೊಡ್ಡ ದಾಳಿ ತಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ 10:30ರ ವೇಳೆ ಗಾಜಿಪುರ್ ಹೂವಿನ ಮಾರುಕಟ್ಟೆಯಲ್ಲಿ ಅನುಮಾನಾಸ್ಪದ ಚೀಲ ಪತ್ತೆಯಾಗಿತ್ತು. ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ತಂಡಗಳು ಮತ್ತು ರಾಷ್ಟ್ರೀಯ ಭದ್ರತಾ ಕಾವಲು ಪಡೆ ಆಗಮಿಸಿ, ಅದನ್ನ ನಿಷ್ಕ್ರಿಯಗೊಳಿಸಿದ್ದವು.