ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ ಕೊರೊನಾ ವೈರಸ್ನ ಹೊಸ ರೂಪಾಂತರಿ ಒಟ್ಟು ಐದು ಮಂದಿಗೆ ಅಂಟಿದಂತಾಗಿದೆ.
ವಿದೇಶದಿಂದ ದೆಹಲಿಗೆ ಹಿಂದಿರುಗಿದ 17 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಅವರೆಲ್ಲನ್ನೂ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಂಜಾನಿಯದಿಂದ ದೆಹಲಿಗೆ ಹಿಂದಿರುಗಿದ ಓರ್ವ ವ್ಯಕ್ತಿಗೆ ಇಂದು ಬೆಳಗ್ಗೆ ಒಮಿಕ್ರಾನ್ ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ದಕ್ಷಿಣಾ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಒಮಿಕ್ರಾನ್ ಬಳಿಕ 38 ರಾಷ್ಟ್ರಗಳಿಗೆ ಹರಡಿದೆ. ಡಿಸೆಂಬರ್ 2ರಂದು ಭಾರತದ ಮೊದಲೆರಡು ಕೇಸ್‌ಗಳು ಕರ್ನಾಟಕದಲ್ಲಿ ವರದಿಯಾಗಿದ್ದವು. ಮೂರು ಮತ್ತು ನಾಲ್ಕನೇ ಕೇಸ್ ನಿನ್ನೆ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ವರದಿಯಾಗಿವೆ. ಇದೀಗ ಐದನೇ ಪ್ರಕರಣ ದೆಹಲಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಒಮಿಕ್ರಾನ್‌ನಿಂದ ಇದುವರೆಗೆ ಸಾವು ವರದಿಯಾಗಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಒಮಿಕ್ರಾನ್, ಇದು ಮರುಸೋಂಕು, ಅಂದರೆ ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತದೆ. ಬಹಳ ವೇಗವಾಗಿ ಹರಡಬಹುದು ಹಾಗೂ ಎರಡು ಬಾರಿ ಲಸಿಕೆ ಹಾಕಿಸಿಕೊಂಡವರಿಗೂ ಅಂಟಬಹುದು ಎಂದು ಹೇಳಲಾಗಿದೆ.
ಇದರ ವಿರುದ್ಧ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯೇ ಎಂದು ಸಂಶೋಧನೆ ನಡೆಸಲಾಗುತ್ತಿದೆ. ಈವರೆಗೆ ಒಮಿಕ್ರಾನ್‌ನಿಂದ ಯಾವುದೇ ಸಾವು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್‌ಒ) ಸ್ಪಷ್ಟಪಡಿಸಿದೆ.