ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ನೂತನ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಜೋರಾಗಿದೆ. ಇದಕ್ಕೆ ಆಕ್ಷೇಪಿಸಿರುವ ಸುಪ್ರೀಂಕೋರ್ಟ್, ಸರ್ಕಾರ ಹಾಗೂ ರೈತರ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ, ಸಮಸ್ಯೆ ಬಗೆಹರಿಸುವಂತೆ ಸೂಚಿಸಿದೆ.
ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ರಾಷ್ಟ್ರೀಯ ವಿಷಯವಾಗುವ ಸಾಧ್ಯತೆಯಿದೆ ಎಂದಿದ್ದು, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈಗ ಸದ್ಯಕ್ಕೆ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಹಾಗೂ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ಸೇರಿದಂತೆ ಸರ್ಕಾರ ಮತ್ತು ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಹೃದಯಾಘಾತದಿಂದ ಮತ್ತೋರ್ವ ರೈತ ಸಾವು
ರೈತರೊಂದಿಗೆ ನೀವು ನಡೆಸುತ್ತಿರುವ ಮಾತುಕತೆಗಳು ಕೆಲಸ ಮಾಡುತ್ತಿಲ್ಲ. ಅವುಗಳು ವಿಫಲಗೊಳ್ಳುತ್ತಿದೆ ಎಂದು ನ್ಯಾಯಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದ್ದು, ಪ್ರತಿಭಟನೆ ಕುರಿತು ದೆಹಲಿ, ಪಂಜಾಬ್, ಹರಿಯಾಣ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ ನಾಳೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಇದೇ ವೇಳೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ನಾವು ಮಾತುಕತೆಗೆ ಸಿದ್ಧವಿದ್ದೇವೆ. ನಾವು ರೈತರಿಗೆ ವಿರುದ್ಧವಾಗಿ ಏನೂ ಮಾಡುವುದಿಲ್ಲ. ವಿವಿಧ ಇಲಾಖೆಗಳ ಮಂತ್ರಿಗಳು ಈಗಾಗಲೇ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ದೆಹಲಿಯ ಗಡಿಗಳಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದು, ಇದರಿಂದಾಗಿ ಸಾಕಷ್ಟು ನಷ್ಟವಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೊರೊನಾ ಪ್ರಕರಣ ಹೆಚ್ಚುವ ಸಾಧ್ಯತೆಯಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆಯನ್ನು ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ನಡೆಸಿದೆ.