ನವದೆಹಲಿ : ಜನವರಿ 26ರಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಸಾಂವಿಧಾನಿಕ ಹಕ್ಕನ್ನು ಹೊಂದಿದ್ದೇವೆ ಎಂದು ರೈತ ಸಂಘಟನೆಗಳು ಹೇಳಿವೆ.
ಭಾರತೀಯ ಕಿಸಾನ್ ಘಟಕದ ಪಂಜಾಬ್ ಪ್ರಧಾನ ಕಾರ್ಯದರ್ಶಿ ಪರಮ್ಜಿತ್ ಸಿಂಗ್ ಮಾತನಾಡಿ, ರ‍್ಯಾಲಿಯನ್ನು ರಾಜ್ಪಥ್ ಅಥವಾ ಉನ್ನತ ಭದ್ರತಾ ಪ್ರದೇಶಗಳಲ್ಲಿ ನಡೆಸಲ್ಲ. ಬದಲಿಗೆ ದೆಹಲಿ ಹೊರವರ್ತುಲ ರಸ್ತೆ (outer ring road)ನಲ್ಲಿ ನಡೆಸಲಾಗುವುದು ಎಂದರು. ನಮಗೆ ದೆಹಲಿ ಪ್ರವೇಶಕ್ಕೆ ಅನುಮತಿ ಕೊಡದ ಕಾರಣ, ಗಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದೇವೆ. ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಶಾಂತಿಯುತವಾಗಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುತ್ತೇವೆ ಎಂದಿದ್ದಾರೆ.
ನಾವು ಸರ್ಕಾರಿ ಸಮಾರಂಭ ನಡೆಯುವ ಸ್ಥಳಕ್ಕೆ ಹೋಗಲ್ಲ. ಹೊರವರ್ತುಲ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ನಂತರ ನಮ್ಮ ಪ್ರತಿಭಟನಾ ಸ್ಥಳಗಳಿಗೆ ಹಿಂದಿರುಗುತ್ತೇವೆ. ಅಲ್ಲದೆ, ಎಲ್ಲಾ ಟ್ರ್ಯಾಕ್ಟರ್ಗಳಿಗೂ ರಾಷ್ಟ್ರೀಯ ಧ್ವಜ ಮತ್ತು ರೈತ ಸಂಘದ ಧ್ವಜಗಳನ್ನು ಅಳವಡಿಸುತ್ತೇವೆ ಎಂದು ರೈತ ಮುಖಂಡ ಲಖ್ಬೀರ್ ಸಿಂಗ್ ಹೇಳಿದರು.
ಕಾನೂನು, ಸುವ್ಯವಸ್ಥೆಗಳ ಬಗ್ಗೆ ದೆಹಲಿ ಪೊಲೀಸರಿಗೆ ಸಮಸ್ಯೆಗಳಿದ್ದರೆ, ಅವರು ರೈತರ ಮುಖಂಡರ ಜತೆ ಚರ್ಚಿಸಿ ಪರ್ಯಾಯ ಮಾರ್ಗಗಳನ್ನು ಸೂಚಿಸಬಹುದು. ಆದರೆ, ಯಾವುದೇ ಕಾರಣಕ್ಕೂ ರ‍್ಯಾಲಿಯನ್ನು ರದ್ದುಗೊಳಿಸಲ್ಲ ಎಂದು ಬಿಕೆಯು (ಏಕ್ತಾ ಉಗ್ರಾಹನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾಹನ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಗೆ ಪ್ರತಿಭಟನಾ ನಿರತ ರೈತರಿಗೆ ಪ್ರವೇಶ ನೀಡಬೇಕೇ ಅಥವಾ ಬೇಡವೇ ಅನ್ನೋ ಪರಮಾಧಿಕಾರ ದೆಹಲಿ ಪೊಲೀಸರಿಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜನವರಿ 19ರಂದು ಪ್ರತಿಭಟನಾಕಾರರು ಮತ್ತು ಸರ್ಕಾರದ ನಡುವೆ 10ನೇ ಸುತ್ತಿನ ಮಾತುಕತೆ ನಡೆಯಲಿದೆ. ನಾಳೆಯೇ ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ತನ್ನ ಮೊದಲ ಸಭೆ ನಡೆಸಲಿದೆ.