ಪಾಟ್ನಾ (ಬಿಹಾರ): ಇಲ್ಲಿನ ಕಹಲ್ಗಾಂವ್ ಡಿಎಸ್‌ಪಿ ರೇಶು ಕೃಷ್ಣ ಅವರ ಪತಿ ಐಪಿಎಸ್ ಅಧಿಕಾರಿಯಂತೆ ಕಾಣಿಸಿಕೊಂಡು ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಕಲಿ ಯುನಿಫಾರ್ಮ್ ಧರಿಸಿ ತೆಗೆಸಿಕೊಂಡಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಅವರ ವಿರುದ್ಧ ಪ್ರಕರಣ ಸಹ ದಾಖಲಾಗಿದೆ.
ಡಿಎಸ್‌ಪಿ ರೇಶು ಕೃಷ್ಣ ತಮ್ಮ ಪತಿಯೊಂದಿಗೆ ತೆಗೆಸಿಕೊಂಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈ ಫೋಟೋದಲ್ಲಿ ನಕಲಿ ಯುನಿಫಾರ್ಮ್ ಧರಿಸಿರುವುದು ಕಂಡುಬಂದಿದೆ. ಆದರೆ ರೇಶು ಕೃಷ್ಣರ ಪತಿ ಯಾವುದೇ ಪೊಲೀಸ್ ಹುದ್ದೆಯಲ್ಲಿಲ್ಲ. ಅದರ ಹೊರತಾಗಿಯೂ ಅವರು ಐಪಿಎಸ್ ಅಧಿಕಾರಿಯ ಸಮವಸ್ತ್ರ ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಪ್ರಕರಣ ಹೊರಬರುತ್ತಿದ್ದಂತೆ ಇಲಾಖಾ ತನಿಖೆಗೆ ಆಗ್ರಹಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಡಿಎಸ್‌ಪಿ ರೇಶು ಕೃಷ್ಣ ತಾವು ಹಾಕಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ಮಹಿಳಾ ಡಿಎಸ್‌ಪಿ ಪತಿ ಧರಿಸಿರುವ ಸಮವಸ್ತ್ರದ ಭುಜದ ಮೇಲೆ ಐಪಿಎಸ್ ಬ್ಯಾಚ್ ಇದೆ ಮತ್ತು ದೆಹಲಿ ಪೊಲೀಸರ ಬ್ಯಾಚ್ ಮತ್ತು ನೇಮ್ ಪ್ಲೇಟ್ ಸಹ ಗೋಚರಿಸುತ್ತದೆ. ಅಕ್ರಮವಾಗಿ ಈ ರೀತಿಯ ಸಮವಸ್ತ್ರವನ್ನು ಧರಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.