ನವದೆಹಲಿ: ಮೃತಪಟ್ಟ ವೃದ್ಧರೊಬ್ಬರ ಅಂತ್ಯಕ್ರಿಯೆ ಸಂದರ್ಭದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಅಂತಿಮ ವಿಧಿವಿಧಾನ ನೆರವೇರಿಸುವಾಗ ತಾತ ದಿಢೀರ್ ಕಣ್ತೆರೆದು ಮಾತನಾಡಿರುವ ವಿಚಿತ್ರ ಘಟನೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಗಿದೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಸತೀಶ್ ಭಾರದ್ವಾಜ್ (62) ಎಂಬ ವೃದ್ಧನನ್ನು ದೆಹಲಿಯ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ ಬೆಳಗ್ಗೆ ಇವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಬಳಿಕ ಮೃತನ ಕುಟುಂಬ ಸದಸ್ಯರು ಅಂತ್ಯಕ್ರಿಯೆ ಮಾಡಲು ಟಿಕ್ರಿ ಖುರ್ದ್ ಪ್ರದೇಶದಲ್ಲಿರುವ ಸ್ಮಶಾನಕ್ಕೆ ತೆರಳಿದ್ದಾರೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೃತ ಅಜ್ಜನ ಬಾಯಿಗೆ ಗಂಗಾಜಲ ಬಿಡುತ್ತಿದ್ದಂತೆಯೇ ಆತ ಕಣ್ತೆರೆದು ಮಾತನಾಡಲು ಶುರು ಮಾಡಿದ್ದಾರೆ. ತಕ್ಷಣವೇ ಕುಟುಂಬಸ್ಥರು ದೆಹಲಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿ, ಆ್ಯಂಬುಲೆನ್ಸ್ನಲ್ಲಿ ವೃದ್ಧನನ್ನು ನರೇಲಾದ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಧರ್ಮ ಸಂಸದ್‌ನಲ್ಲಿ ಗೋಡ್ಸೆ ಹೊಗಳಿ ಗಾಂಧಿ ತೆಗಳಿದ ಸಂತ ಕಲಿಚರಣ್; ವೇದಿಕೆ ತೊರೆದ ಮಹಾಂತ್ ರಾಮ ಸುಂದರ್ ದಾಸ್
ತಪಾಸಣೆ ವೇಳೆ ವೈದ್ಯರು, ಸತೀಶ್ ಭಾರದ್ವಾಜ್ ಅವರ ಬಿಪಿ, ಹೃದಯ ಬಡಿತ, ನಾಡಿ ಮಿಡಿತದ ವರದಿ ನಾರ್ಮಲ್ ಇದೆ, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.