ಅಹಮದಾಬಾದ್( ಗುಜರಾತ್): ಬಿಪರ್‌ಜೋಯ್ ಪ್ರಬಲ ಚಂಡಮಾರುತ ಗುರುವಾರ ಸಂಜೆ ಗುಜರಾತ್ಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನೆಲೆಸಿರುವ ಸುಮಾರು 30 ಸಾವಿರ ಜನರನ್ನು ರಾಜ್ಯ ಸರ್ಕಾರ ಸ್ಥಳಾಂತರಿಸಿ ತ್ವರಿತ ಕಾರ್ಯವನ್ನ ಕೈಗೊಂಡಿದೆ. ಅಲ್ಲದೇ ಇಂದು ಹೆಚ್ಚಿನ ಜನರ ಸ್ಥಳಾಂತರ ಕಾರ್ಯ ನಡೆಯಲಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಗುಜರಾತ್ನ ಕಚ್ ಜಿಲ್ಲೆಯ ಜಖೌ ಬಂದರಿಗೆ ಬಿಪರ್‌ಜೋಯ್ ಚಂಡಮಾರುತವು ಅಪ್ಪಳಿಸಲಿದ್ದು, ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಸಮುದ್ರ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಚಂಡಮಾರುತ ಹಾದು ಹೋಗಲಿರುವ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಭಾರತೀಯ ಸೇನೆ ಮತ್ತು ಇತರ ಪಡೆಗಳನ್ನು ನೇಮಿಸಲಾಗಿದೆ. ತುರ್ತು ಕಾರ್ಯಾಚರಣೆ ಕೈಗೊಳ್ಳಲು ಎನ್‌ಡಿಆರ್‌ಎಫ್ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಭಾರತೀಯ ಸೇನಾ ಪಡೆಯೂ ಕೂಡ ಎನ್‌ಡಿಆರ್‌ಎಫ್ ಜೊತೆ ಇರಲಿದ್ದು, ರಕ್ಷಣಾ ಕ್ರಮಗಳ ಬಗ್ಗೆ ಸಲಹೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುಯಲ್ ಸಭೆ ನಡೆಸಿ, ಸೂಕ್ಷ್ಮ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರ ಸುರಕ್ಷತೆಗೆ ಆದ್ಯತೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸೂಚಿಸಿದ್ದಾರೆ. ಹಾಗೆಯೇ ಜನರನ್ನು ಸ್ಥಳಾಂತರಿಸಿರುವ ಪ್ರದೇಶಗಳಲ್ಲಿ ಅಗತ್ಯ ಸೇವೆಗಳಾದ ವಿದ್ಯುತ್, ದೂರಸಂಪರ್ಕ, ಆರೋಗ್ಯ ಮತ್ತು ಕುಡಿಯುವ ನೀರು ಸೇರಿದಂತೆ ಜನರಿಗೆ ಯಾವುದೇ ತೊಂದರೆಯಾಗದ ಹಾಗೆ ವ್ಯವಸ್ಥೆ ಮಾಡಲು ಹೇಳಿದ್ದಾರೆ. ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯ ಹಾಗೂ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಎಂಟು ಜಿಲ್ಲೆಗಳ ಅಧಿಕಾರಿಗಳು ಭಾಗಿಯಾಗಿದ್ದರು.
ಇದೇ ವೇಳೆ, ರಾಜ್ಯ ಪರಿಹಾರ ಆಯುಕ್ತರಾದ ಅಲೋಕ್ ಕುಮಾರ್ ಪಾಂಡೆ, ಸ್ಥಳಾಂತರದ ಬಗ್ಗೆ ಮಾಹಿತಿ ನೀಡಿದ್ದಾರೆ. "ಕರಾವಳಿ ಪ್ರದೇಶದ ಜನರನ್ನು ಈಗಾಗಲೇ ಸ್ಥಳಾಂತರ ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ಈ ವರೆಗೂ ಸುಮಾರು 30,000 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಸಮುದ್ರ ತೀರದಿಂದ ಸುಮಾರು 10 ಕಿ ಮಿ ವರೆಗೂ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ. ಈ ಹವಾಮಾನ ವೈಪರೀತ್ಯದಿಂದ ಯಾವುದೇ ಪ್ರಾಣಹಾನಿಯಾಗದಂತೆ ತಡೆಯಲು ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಪರಿಹಾರ ಆಯುಕ್ತರು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ (IMD) ನಿರ್ದೇಶಕಿ ಮನೋರಮಾ ಮೊಹಂತಿ ಅವರ ಪ್ರಕಾರ, ಬಿಪರ್‌ಜೋಯ್ ಚಂಡಮಾರುತವು ಕಚ್‌ನ ಮಾಂಡ್ವಿ ಮತ್ತು ಜಖೌ ಬಂದರಿನ ಬಳಿ ಭೂಕುಸಿತವನ್ನು ಉಂಟುಮಾಡುವ ಸಾಧ್ಯತೆಗಳಿವೆ ಎಂದು ಹೇಳಿದರು. ಗುರುವಾರ ಸಂಜೆ ವೇಳೆಗೆ 125 ರಿಂದ 135 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ. ಸೌರಾಷ್ಟ್ರ-ಕಚ್ ಪ್ರದೇಶದ ಕರಾವಳಿ ಭಾಗಗಳಲ್ಲಿ, ವಿಶೇಷವಾಗಿ ಕಚ್, ಪೋರಬಂದರ್ ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಭಾರೀ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ ಮುನ್ಸೂಚನೆಗಳನ್ನು ಅನುಸರಿಸಿ ಮೀನುಗಾರರು ತಾತ್ಕಾಲಿಕವಾಗಿ ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಹಡಗುಗಳನ್ನು ಲಂಗರು ಹಾಕಿದ್ದಾರೆ.
ಇನ್ನು ಎರಡು ಹಂತಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಮುದ್ರ ತೀರದಿಂದ 5 ಕಿಲೋಮೀಟರ್ ಒಳಗಿನ ನಿವಾಸಿಗಳನ್ನು ಮೊದಲು ಸ್ಥಳಾಂತರಿಸಲಾಗುತ್ತಿದೆ. ತರುವಾಯ, 5 ರಿಂದ 10 ಕಿಲೋಮೀಟರ್ ದೂರದಲ್ಲಿ ವಾಸಿಸುವವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತದೆ.
ಪರಿಹಾರ ಕಾರ್ಯಗಳಲ್ಲಿ ನೆರವು ನೀಡಲು ಎನ್‌ಡಿಆರ್‌ಎಫ್‌ನ 17 ತಂಡಗಳು ಮತ್ತು ಎಸ್‌ಡಿಆರ್‌ಎಫ್‌ನ 12 ತಂಡಗಳನ್ನು ದೇವಭೂಮಿ ದ್ವಾರಕಾ, ರಾಜ್‌ಕೋಟ್, ಜಾಮ್‌ನಗರ, ಜುನಾಗಢ್, ಪೋರ್ಬಂದರ್, ಗಿರ್ ಸೋಮನಾಥ್, ಮೊರ್ಬಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಸಮುದ್ರ ತೀರದಲ್ಲಿ ವಾಸಿಸುತ್ತರಿಉವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ಕ್ರಮವಾಗಿ ಪಶ್ಚಿಮ ರೈಲ್ವೇಯು 69 ರೈಲುಗಳನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: Effect of cyclone: ಮುಂಬೈ, ಗುಜರಾತ್ ಕರಾವಳಿಯಲ್ಲಿ 'ಬಿಪೊರ್‌ಜಾಯ್' ಆರ್ಭಟ: ಭೋರ್ಗರೆದ ಬೃಹತ್ ಅಲೆಗಳು