ಮೊರಿಗಾಂವ್ (ಅಸ್ಸಾಂ): ಹಸು ಕಳ್ಳರನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದು, ಓರ್ವ ಕಳ್ಳ ಸಾವನ್ನಪ್ಪಿರುವ ಘಟನೆ ಮಧ್ಯ ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ಅಹತ್ಗುರಿ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿದೆ. ಒಟ್ಟು 6 ಜನ ಕಳ್ಳರಲ್ಲಿ ಮೂವರು ತಪ್ಪಿಸಿಕೊಂಡಿದ್ದರು. ಉಳಿದ ಮೂವರು ಸಿಕ್ಕಿಹಾಕಿಕೊಂಡಿದ್ದಾರೆ. ಕೋಪಗೊಂಡ ಜನರು ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಹೆಚ್ಚುವರಿ ಎಸ್ಪಿ ಸ್ಥಳಕ್ಕಾಗಮಿಸಿ ಗಾಯಗೊಂಡಿದ್ದ ಮೂವರು ಕಳ್ಳರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಓರ್ವ ಪ್ರಾಣ ಕಳೆದುಕೊಂಡಿದ್ದ. ಜನರು ಮನಸೋಇಚ್ಛೆ ಥಳಿಸಿದ್ದರಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರ ಪೂರ್ಣ ವಿವರ ಪಡೆಯಲು ಸಾಧ್ಯವಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತ್ಯಕ್ಷ್ಯದರ್ಶಿಯೊಬ್ಬರು ಮಾತನಾಡಿ, "ಸೋಮವಾರ ರಾತ್ರಿ ಕಳ್ಳರು ಕೋಲಿಯಾ ದಾಸ್ ಎಂಬವರ ಗೋಶಾಲೆಯಿಂದ ದನಗಳನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಕೋಲಿಯಾ ಅವರ ಪತ್ನಿ ಜೋರಾಗಿ ಕಿರುಚಿದ್ದಾರೆ. ತಕ್ಷಣ ಪಕ್ಕದಲ್ಲೇ ಇದ್ದ ನೆರೆ-ಹೊರೆಯವರು ಆಗಮಿಸಿ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಮೂವರು ತಪ್ಪಿಸಿಕೊಂಡು, ಮೂವರು ಸಿಕ್ಕಿಹಾಕಿಕೊಂಡರು. ಆಕ್ರೋಶಗೊಂಡ ಜನರು ಮನಬಂದಂತೆ ಥಳಿಸಿ, ಅವರು ಹಸುಗಳನ್ನು ಸಾಗಿಸಲು ತಂದಿದ್ದ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ: ಓರ್ವನ ಬಂಧನ