ಕೊರೊನಾ ತನ್ನ ಆರ್ಭಟವನ್ನು ರೂಪಾಂತರಿ ತಳಿಗಳ ಮೂಲಕ ಹೆಚ್ಚಿಸುತ್ತಾ ಬರುತ್ತಿದೆ. ಅದರಂತೆ ದೇಶದಲ್ಲಿ ಸೋಂಕು ನಿರ್ಮೂಲನೆಗೆ ಲಸಿಕೆ ಎಂಬ ರಾಮಬಾಣವನ್ನೂ ನೀಡಲಾಗುತ್ತಿದ್ದು, ಸೋಂಕು ಪ್ರಸರಣವನ್ನು ತಡೆದು ನಿಲ್ಲಿಸುವ ಸರ್ವ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಆದರೂ ಕೂಡಾ ದೇಶಾದ್ಯಂತ ಕೊರೊನಾದ ಆರ್ಭಟ ಜೋರಾಗಿಯೇ ಸಾಗುತ್ತಿದೆ. ಇದನ್ನೆಲ್ಲಾ ಗಮನಿಸಿದರೆ ಎಲ್ಲಿ ಮತ್ತೆ ಲಾಕ್‌ಡೌನ್ ಆಗುವುದೋ? ಎಂಬ ಆತಂಕ, ಕಳವಳ ಜನರನ್ನು ಕ್ಷಣಕ್ಷಣಕ್ಕೂ ಕಾಡುತ್ತಿದೆ.
1. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಹಾವಳಿ ತೀವ್ರವಾಗಿದೆ. ಪರಿಣಾಮ, ಕೇಜ್ರಿವಾಲ್ ಸರ್ಕಾರ ವೀಕೆಂಡ್ ಕರ್ಫ್ಯೂ ಮೊರೆ ಹೋಗಿದೆ. ಇದರಿಂದ ವಾರಾಂತ್ಯದ ಎರಡು ದಿನ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಇಂದು 5,500 ಹೊಸ ಕೇಸ್ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ 8.5 ತಲುಪಿದೆ.
2. ಉತ್ತರ ಪ್ರದೇಶದ ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿಂದು 33 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 32 ಆಸ್ಪತ್ರೆ ಸಿಬ್ಬಂದಿ ಮತ್ತು 1 ತುರ್ತು ವೈದ್ಯರು ಸೇರಿದ್ದಾರೆ. ಎಲ್ಲರೂ ಲಕ್ಷಣರಹಿತರಾಗಿದ್ದಾರೆ.
3. ಮಹಾರಾಷ್ಟ್ರದಲ್ಲಿ ಇಂದು ಸಂಜೆ ಗೋವಾದಿಂದ ಮುಂಬೈಗೆ ತಲುಪಲಿರುವ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿರುವ ಪ್ರತಿಯೊಬ್ಬರನ್ನೂ ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಹಡಗಿನಲ್ಲಿ ಇರುವ 66 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಇದೇ ವೇಳೆ, ಮುಂಬೈನಲ್ಲಿ ನಿನ್ನೆ ಒಂದೇ ದಿನ ದಾಖಲೆಯ 8 ಸಾವಿರಕ್ಕೂ ಅಧಿಕ ಕೋವಿಡ್-19 ಸೋಂಕಿತ ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದು 20 ಸಾವಿರದ ಗಡಿ ದಾಟಿದರೆ ಲಾಕ್‌ಡೌನ್ ಹೇರಿಕೆ ಮಾಡಬೇಕಾಗುತ್ತದೆ ಎಂದು ಮುಂಬೈ ಮೇಯರ್ ತಿಳಿಸಿದ್ದಾರೆ.
4. ಪಂಜಾಬ್ನ ಪಟಿಯಾಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 102 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಎಲ್ಲಾ ಪ್ರಕರಣಗಳಲ್ಲಿ ಒಮಿಕ್ರಾನ್ ರೂಪಾಂತರದ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಪರಿಣಾಮ ಜೀನೋಮ್ ಅನುಕ್ರಮಕ್ಕಾಗಿ ಮಾದರಿಗಳನ್ನು ಕಳುಹಿಸಲಾಗಿದೆ. ಈ ಮೂಲಕ ಪಟಿಯಾಲ ಆಡಳಿತವು ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಿದೆ.
5. ಪಂಜಾಬ್ ಸರ್ಕಾರವು ಕೆಲವು ವಿನಾಯಿತಿಗಳೊಂದಿಗೆ ಪುರಸಭೆಯ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಿದೆ. ಬಾರ್‌ಗಳು, ಸಿನಿಮಾ ಹಾಲ್‌ಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಸ್ಪಾಗಳು 50 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ನೀಡಲಾಗುತ್ತದೆ. ಸರ್ಕಾರಿ, ಖಾಸಗಿ ಕಚೇರಿಗಳಿಗೆ ಹಾಜರಾಗಲು ಸಂಪೂರ್ಣ ಲಸಿಕೆ ಹಾಕಿದ ಸಿಬ್ಬಂದಿ ಮಾತ್ರ ಅವಕಾಶ ನೀಡಲಾಗಿದೆ.
6. ದೇಶದಲ್ಲಿ 23.50 ಲಕ್ಷ ಜನರು ನಿನ್ನೆ ಮೊದಲ ಡೋಸ್ ಪಡೆದಿದ್ದಾರೆ. 33.70 ಲಕ್ಷ ಎರಡನೇ ಡೋಸ್ ಪಡೆದಿದ್ದಾರೆ. 15-17 ವರ್ಷ ವಯಸ್ಸಿನ 42.06 ಲಕ್ಷ ಜನರು ನಿನ್ನೆ ಮೊದಲ ಡೋಸ್ ಪಡೆದಿದ್ದು, 146.28 ಕೋಟಿ ಜನ ಈವರೆಗೆ ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಾರೆ.
7. ಕರ್ನಾಟಕದ ವಿಷಯಕ್ಕೆ ಬಂದರೆ ಇಲ್ಲೂ ಸಹ ಕೊರೊನಾ ತನ್ನ ಪ್ರಸರಣ ಶಕ್ತಿಯನ್ನು ಹೆಚ್ಚು ಮಾಡಿಕೊಂಡಿದೆ. ಈ ಕಾರಣಕ್ಕಾಗಿ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತರುವ ಮುನ್ಸೂಚನೆ ನೀಡಿದೆ. ರಾಜ್ಯಗಳಲ್ಲಿ ಶಾಲೆಗಳು ಬಂದ್ ಆಗುತ್ತವೆಯೇ? ಎಂಬುದರ ಬಗ್ಗೆ ರಾಜ್ಯದಲ್ಲಿ ಗೊಂದಲ ಏರ್ಪಟ್ಟಿದೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?
ಶಾಲೆಗಳಲ್ಲಿ ಈವರೆಗೂ ಹೆಚ್ಚು ಪ್ರಕರಣ ಕಂಡು ಬಂದಿಲ್ಲ. ಈ ಹಿಂದೆ ವಸತಿ ಶಾಲೆಗಳಲ್ಲಿ ಕಂಡು ಬಂದಿತ್ತು. ಈ ಬಗ್ಗೆ ತಾಂತ್ರಿಕ ಸಮಿತಿಗೆ ವರದಿ ನೀಡಲು ಸೂಚಿಸಿದ್ದೇನೆ. ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಾಸ್ಕ್ ಫೋರ್ಸ್ ಸಭೆ ಕರೆದಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದರೆ ಎಲ್ಲಾ ಶಾಲೆಗಳನ್ನು ಅನಿವಾರ್ಯವಾಗಿ ಬಂದ್ ಮಾಡಿ ಆನ್‌ಲೈನ್ ಕಲಿಕೆಗೆ ಒತ್ತು ಕೊಡಬೇಕಾಗುತ್ತದೆ ಎಂದಿದ್ದಾರೆ.
8. ಮಂಡ್ಯದಲ್ಲಿ ಮತ್ತೆ ಕೋವಿಡ್ ಆತಂಕ ಎದುರಾಗಿದೆ. ತಮಿಳುನಾಡಿಗೆ ಹೋಗಿ ಜಿಲ್ಲೆಗೆ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. ತಮಿಳುನಾಡಿನ ಓಂಶಕ್ತಿಗೆ ಹೋಗಿದ್ದ ಶ್ರೀರಂಗಪಟ್ಟಣದ ಶೆಟ್ಟಿಹಳ್ಳಿ ಗ್ರಾಮದ ಭಕ್ತರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ದೇವಸ್ಥಾನಕ್ಕೆ ಹೋಗಿ ಬಂದಿರುವ 30ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಇಂದು ಅಥವಾ ನಾಳೆ ಮತ್ತೆರಡು ಬಸ್ಗಳು ಶ್ರೀರಂಗಪಟ್ಟಣಕ್ಕೆ ವಾಪಸಾಗುವ ಸಾಧ್ಯತೆ ಇದೆ. ಆರೋಗ್ಯ ಸಿಬ್ಬಂದಿ ತಮಿಳುನಾಡಿನಿಂದ ವಾಪಸಾದವರ ಟೆಸ್ಟ್ ಮಾಡುತ್ತಿದ್ದು, ಪಾಸಿಟಿವ್ ಬಂದವರನ್ನು ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೂ ಪರೀಕ್ಷೆ ಮಾಡುತ್ತಿದ್ದಾರೆ.
9. ರಾಜ್ಯದಲ್ಲಿ ಇಂದು 2,479 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಪಾಸಿಟಿವಿಟಿ ದರ ಶೇ 2.59 ಕ್ಕೆ ಏರಿದೆ. ಇಂದು 2,479 ಪ್ರಕರಣ ವರದಿಯಾಗಿದ್ದು, ಪ್ರಮುಖವಾಗಿ ಬೆಂಗಳೂರಲ್ಲೇ 2,053 ಜನರಿಗೆ ಕೊರೊನಾ ವಕ್ಕರಿಸಿದೆ. ಈ ಮೂಲಕ ಇಲ್ಲಿ ಪಾಸಿಟಿವಿಟಿ ದರ ಶೇ 2.59ಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿಂದು ಯಾವುದೇ ಒಮಿಕ್ರಾನ್ ಪ್ರಕರಣ ವರದಿಯಾಗಿಲ್ಲ. ಈವರೆಗಿನ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 77. ಕೊರೊನಾದಿಂದ ಇಂದು 4 ಜನರು ಸಾವಿಗೀಡಾಗಿದ್ದಾರೆ. ಹಾಗೆಯೇ ಒಟ್ಟಾರೆ 95,391 ಜನರಿಗೆ ಪರೀಕ್ಷೆ ಮಾಡಲಾಗಿದೆ.