ಲಖನೌ(ಉತ್ತರ ಪ್ರದೇಶ): ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ನಿರಾಕರಣೆಗೊಂಡಿರುವುದಕ್ಕಾಗಿ ಅಸಮಾಧಾನಗೊಂಡಿರುವ ಉತ್ತರ ಪ್ರದೇಶದ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರಿಯಾಂಕಾ ಮೌರ್ಯ ಇದೀಗ ಬಿಜೆಪಿ ಸೇರುವುದು ಬಹುತೇಕ ಖಚಿತಗೊಂಡಿದೆ. 'ನಾನು ಹುಡುಗಿ, ಹೋರಾಡಬಲ್ಲೆ' (Ladki Hoon, Lad Sakti Hoon) ಪ್ರಚಾರದ ಕಾಂಗ್ರೆಸ್ ಪೋಸ್ಟರ್ ಗರ್ಲ್ ಖ್ಯಾತಿಯ ಪ್ರಿಯಾಂಕಾ ಮುಂದಿನ 2-3 ದಿನಗಳಲ್ಲಿ ಕಮಲ ಮುಡಿಯಲಿದ್ದಾರೆ.
ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ
ಲಂಚ ನೀಡಲು ಒಪ್ಪದ ಕಾರಣ ನನಗೆ ಟಿಕೆಟ್ ನೀಡಲು ಪಕ್ಷ ಹಿಂದೇಟು ಹಾಕಿದೆ ಎಂದು ಆರೋಪ ಮಾಡಿರುವ ಅವರು, ಕಳೆದ ಒಂದು ತಿಂಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡಿರುವ ವ್ಯಕ್ತಿಗೆ ಟಿಕೆಟ್ ನೀಡಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಪ್ರಚಾರಕ್ಕಾಗಿ ನನ್ನನ್ನು ಹಾಗೂ ನನ್ನ 10 ಲಕ್ಷ ಸಾಮಾಜಿಕ ಜಾಲತಾಣದ ಹಿಂಬಾಲಕರನ್ನ ಬಳಕೆ ಮಾಡಿಕೊಂಡಿದ್ದು, ಇದೀಗ ಟಿಕೆಟ್ ನೀಡಲು ಹಿಂದೇಟು ಹಾಕಿದೆ. ಇದು ಅನ್ಯಾಯ. ಎಲ್ಲವೂ ಈಗಾಗಲೇ ನಿರ್ಧಾರಗೊಂಡಿತ್ತು ಎಂದಿದ್ದಾರೆ.
ಇದನ್ನೂ ಓದಿರಿ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದ ಬಿಜೆಪಿ
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಕಾಂಗ್ರೆಸ್ ಮಹಿಳೆಯರಿಗಾಗಿ ಲಡ್ಕಿ ಹೂ, ಲಡ್ ಸಕ್ತಿ ಹೂ(Ladki Hoon, Lad Sakti Hoon) ಎಂಬ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನದ ಪೋಸ್ಟರ್ನಲ್ಲಿ ಪ್ರಿಯಾಂಕಾ ಮೌರ್ಯ ಕಾಣಿಸಿಕೊಂಡಿದ್ದರು.
ಇವರು ಲಕ್ನೋದ ಸರೋಜಿನಿ ನಗರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತ ಸಹ ವ್ಯಕ್ತಪಡಿಸಿದ್ದರು. ಆದರೆ, ಇತ್ತೀಚೆಗೆ ಕಾಂಗ್ರೆಸ್ನಿಂದ ರಿಲೀಸ್ ಆಗಿರುವ ಪಟ್ಟಿಯಲ್ಲಿ ಇವರ ಹೆಸರು ಕಾಣಿಸಿಕೊಂಡಿರಲಿಲ್ಲ. ಇದರಿಂದ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.