ಚಂಡೀಗಢ(ಪಂಜಾಬ್): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಪಂಜಾಬ್ ಸಂಸದ ಜಲಧರ್ ಸಂತೋಖ್ ಸಿಂಗ್ ಚೌಧರಿ ಅವರು ಇಂದು ಬೆಳಗ್ಗೆ ಹಠಾತ್ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ದಿಗ್ಭ್ರಮೆ ಮೂಡಿಸಿದ್ದು, ಸದ್ಯಕ್ಕೆ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಪಂಜಾಬ್ನಲ್ಲಿ ಸಾಗುತ್ತಿರುವ ಕಾಂಗ್ರೆಸ್ ಜೋಡೋ ಯಾತ್ರೆ ಇಂದು ಬೆಳಗ್ಗೆ ಲಾಧೋವಲ್ ಟೋಲ್ ಪ್ಲಾಜಾದಿಂದ ಆರಂಭವಾಯಿತು. ಎಂದಿನಂತೆ ನಾಯಕರು ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದರು. ಯಾತ್ರೆಯನ್ನು ಬೆಂಬಲಿಸಿ ಕಾಂಗ್ರೆಸ್ ಸಂಸದ ಜಲಧರ್ ಸಂತೋಖ್ ಸಿಂಗ್ ಚೌಧರಿ ಅವರು ಕೂಡ ಭಾಗವಹಿಸಿದ್ದರು. ಯಾತ್ರೆಯಲ್ಲಿ ನಡೆಯುತ್ತಿದ್ದ ವೇಳೆ ಸಂತೋಖ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಫಗ್ವಾರದ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟೊತ್ತಿಗಾಗಲೇ ಸಂತೋಖ್ ಸಿಂಗ್ ಚೌಧರಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ವೈದ್ಯರು ಸಂಸದರ ಸಾವನ್ನು ದೃಢಪಡಿಸಿದ್ದರಿಂದ ಯಾತ್ರೆಯನ್ನು ಮೊಟಕುಗೊಳಿಸಲಾಯಿತು.
ಇನ್ನು ಸಿಂಗ್ ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂತಾಪ ಸೂಚಿಸಿದ್ದಾರೆ. "ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಕಾಲಿಕ ಸಾವು ತೀವ್ರ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಸಂಸದರ ಸಾವಿನ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, "ಹೃದಯಾಘಾತಕ್ಕೀಡಾಗಿ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಇಂತಹ ದುಃಖದ ಸಮಯದಲ್ಲಿ ಅವರ ಇಡೀ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಲೂಧಿಯಾನದ ಲಾಧೋವಲ್ ಟೋಲ್ ಪ್ಲಾಜಾದಿಂದ ಭಾರತ್ ಜೋಡೋ ಯಾತ್ರೆ ಆರಂಭಗೊಂಡಿತ್ತು. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆ ಜನವರಿ 30ಕ್ಕೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ. ರಾಹುಲ್ ಗಾಂಧಿ ಅವರು ಅಂದು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಯಾತ್ರೆ ಸಂಪನ್ನವಾಗಲಿದೆ. ಭಾರತ್ ಜೋಡೋ ಪಾದಯಾತ್ರೆಯು ಇಲ್ಲಿಯವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ದಾಟಿ ಬಂದಿದೆ. 120 ದಿನ 3 ಸಾವಿರ ಕಿಲೋ ಮೀಟರ್ಗೂ ಅಧಿಕ ದೂರ ಕ್ರಮಿಸಿ ಬಂದಿದೆ.
26ರಿಂದ ಹಾಥ್ ಸೇ ಹಾಥ್ ಜೋಡೋ: ಭಾರತ್ ಜೋಡೋ ಯಾತ್ರೆಯ ಉದ್ದೇಶ ರಾಜಕೀಯ ಮಾಡುವುದಲ್ಲ ಎಂದು ಕಾಂಗ್ರೆಸ್ ಹೇಳುತ್ತಿದ್ದರೂ, ಯಾತ್ರೆಯ ಉದ್ದಕ್ಕೂ ಜನರಿಂದ ನಿರೀಕ್ಷೆಗೂ ಮೀರಿ ಹೆಚ್ಚಿನ ಮತ್ತು ಉತ್ತಮ ಬೆಂಬಲ ಸಿಕ್ಕಿದೆ. ಇದರ ಯಶಸ್ಸನ್ನು ಮನಗಂಡು ಹಾಥ್ ಸೇ ಹಾಥ್ ಜೋಡೋಗೆ ಕಾಂಗ್ರೆಸ್ ಸಜ್ಜಾಗಿದೆ. ಜನವರಿ 26ರಿಂದಲೇ ಈ ಹಾಥ್ ಸೇ ಹಾಥ್ ಜೋಡೋ ಪ್ರಾರಂಭವಾಗಲಿದೆ. 2023ರಲ್ಲಿ ನಡೆಯಲಿರುವ ಒಂಬತ್ತು ವಿಧಾನಸಭಾ ಚುನಾವಣೆಗಳು ಮತ್ತು 2024ರ ಲೋಕಸಭಾ ಚುನಾವಣೆಗೆ ಜನ ಬೆಂಬಲವನ್ನು ಗಳಿಸುವುದೇ ಇದರ ಗುರಿಯಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿದೆ.