ನವದೆಹಲಿ: ಸತತವಾಗಿ 11 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಾಣುತ್ತಿದ್ದು, ಇಂಧನ ಬೆಲೆ ಏರಿಕೆಯಿಂದಾಗಿ 2014ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಸುಮಾರು 21.50 ಲಕ್ಷ ಕೋಟಿ ರೂಪಾಯಿ ಗಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 2019ರ ಮೇ ತಿಂಗಳಿನಿಂದ ಪೆಟ್ರೋಲ್ ಬೆಲೆ 15.21 ರೂಪಾಯಿ ಮತ್ತು ಡೀಸೆಲ್ ಬೆಲೆ 15.33 ರೂಪಾಯಿ ಹೆಚ್ಚಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೇವಲ ಸಮರವಲ್ಲ, ಇದು ಮಾಹಿತಿ ಸಮರ: ಭಾರತದ ವಿರುದ್ಧ ಟರ್ಕಿ, ಪಾಕ್ ಷಡ್ಯಂತ್ರ.?
ಬಿಜೆಪಿಯನ್ನು ಭಯಂಕರ್ ಜನಲೂಟ್ ಪಾರ್ಟಿ ಎಂದು ವ್ಯಂಗ್ಯವಾಡಿರುವ ಸುರ್ಜೇವಾಲಾ, 2014ರ ಮೇ 26ರಂದು ಕಚ್ಚಾ ತೈಲ ಒಂದು ಬ್ಯಾರೆಲ್ಗೆ 108.05 ಡಾಲರ್ ಇತ್ತು. ಈಗ ಕಚ್ಚಾ ತೈಲ ಬೆಲೆ ಒಂದು ಬ್ಯಾರೆಲ್ಗೆ 63.65 ಡಾಲರ್ ಇದೆ ಎಂದಿದ್ದಾರೆ.
ಕಚ್ಚಾ ತೈಲ ಬೆಲೆ ಹೆಚ್ಚಿದ್ದರೂ 2014ರ ಮೇ ತಿಂಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 71.51 ರೂಪಾಯಿ ಇತ್ತು. ಈಗ ಪೆಟ್ರೋಲ್ ಬೆಲೆ 90.19 ರೂಪಾಯಿಗೆ ಏರಿಕೆಯಾಗಿದೆ ಎಂದಿದ್ದಾರೆ. ಈ ಮೂಲಕ ಕಚ್ಚಾ ತೈಲ ಬೆಲೆ ಶೇಕಡಾ 41ರಷ್ಟು ಕಡಿಮೆಯಾಗಿದ್ದರೂ ಇಂಧನ ಬೆಲೆ ಶೇಕಡಾ 26ರಷ್ಟು ಹೆಚ್ಚಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಕೇಂದ್ರ ವಿಧಿಸಿರುವ ಹೆಚ್ಚಿನ ಅಬಕಾರಿ ಸುಂಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.