ಜಮ್ಮು: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಪಾಕ್ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಈಗಾಗಲೇ ಅನೇಕ ಬಾರಿ ಡ್ರೋನ್ ಮೂಲಕ ತಮ್ಮ ವಸ್ತುಗಳನ್ನು ಸಾಗಿಸುತ್ತಿರುವ ಉಗ್ರರ ಕಾರ್ಯಾಚರಣೆಯನ್ನು ಯೋಧರು ನಾಶಪಡಿಸಿದ್ದಾರೆ. ಬಿಎಸ್‌ಎಫ್ ಯೋಧರು ಗುರುವಾರ ಮುಂಜಾನೆ ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಬಳಿ ಶಂಕಿತ ಪಾಕಿಸ್ತಾನಿ ಡ್ರೋನ್‌ನ ಮೇಲೆ ಗುಂಡು ಹಾರಿಸಿರುವುದು ತಿಳಿದು ಬಂದಿದೆ.
ಡ್ರೋನ್ ಯಾವುದೇ ಆಯುಧ ಬೀಳಿಸಿದರೆ ಅಥವಾ ಸ್ಫೋಟಗೊಂಡರೆ ಅದನ್ನು ತಕ್ಷಣವೇ ಪತ್ತೆಹಚ್ಚಲು ಈ ಪ್ರದೇಶದಲ್ಲಿ ಸಂಪೂರ್ಣ ಶೋಧ ನಡೆಯುತ್ತಿದೆ. ಬೆಳಗಿನ ಜಾವ 4.15ರ ಸುಮಾರಿಗೆ ಅರ್ನಿಯಾ ಪ್ರದೇಶದಲ್ಲಿ ಲೈಟ್ ಆನ್ ಮತ್ತು ಆಫ್ ಆಗುತ್ತಿರುವುದು ಕಂಡು ಬಂದಿದ್ದು, ಡ್ರೋನ್ ಎಂದು ಶಂಕಿಸಲಾಗಿದೆ ಅಂತಾ ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.
ಓದಿ: ಡ್ರೋನ್ ಮೂಲಕ ಸ್ಫೋಟಕಗಳ ಕಳ್ಳಸಾಗಣೆ.. ಗಡಿಯಲ್ಲಿ ಮೂರು ಟೈಮರ್ ಐಇಡಿ ಪತ್ತೆ ಹಚ್ಚಿದ ಸೇನೆ
ಸುಮಾರು 300 ಮೀಟರ್ ಎತ್ತರದಲ್ಲಿ ಹಾರುತ್ತಿದ್ದ ವಸ್ತುವಿನ ಮೇಲೆ ಬಿಎಸ್‌ಎಫ್ ಸಿಬ್ಬಂದಿ ತಕ್ಷಣ ಗುಂಡು ಹಾರಿಸಿದ್ದಾರೆ. ಬಳಿಕ ಅದು ಪಾಕಿಸ್ತಾನದ ಕಡೆ ತಿರುಗಿತು. ಜಮ್ಮು ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್‌ಗಳ ಮೂಲಕ ಪಾಕಿಸ್ತಾನದ ಉಗ್ರರು ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವುದರ ಬಗ್ಗೆ ಭದ್ರತಾ ಪಡೆಗಳು ಜಾಗರೂಕವಾಗಿವೆ ಎಂದು ಅವರು ಹೇಳಿದರು.
ಭದ್ರತಾ ಪಡೆಗಳು ಇತ್ತೀಚೆಗೆ ಜಮ್ಮು, ಕಥುವಾ ಮತ್ತು ಸಾಂಬಾ ಸೆಕ್ಟರ್‌ಗಳಲ್ಲಿ ಹಲವಾರು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದು, ಅದರಲ್ಲಿ ರೈಫಲ್‌ಗಳು, ಐಇಡಿಗಳು, ಡ್ರಗ್ಸ್ ಮತ್ತು ಜಿಗುಟಾದ ಬಾಂಬ್‌ಗಳು ಪತ್ತೆಯಾಗಿವೆ. ಜಮ್ಮುವಿನ ಅಖ್ನೂರ್ ಗಡಿ ಪ್ರದೇಶದಲ್ಲಿ ಡ್ರೋನ್‌ನಿಂದ ಬಿದ್ದ ಮೂರು ಮ್ಯಾಗ್ನೆಟಿಕ್ ಐಇಡಿಗಳನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮೇ 29 ರಂದು ಕಥುವಾ ಜಿಲ್ಲೆಯ ರಾಜ್‌ಬಾಗ್ ಪ್ರದೇಶದಲ್ಲಿ ಡ್ರೋನ್‌ಗಳ ಜೊತೆಗೆ ಏಳು ಜಿಗುಟಾದ ಬಾಂಬ್‌ಗಳು ಮತ್ತು ಹಲವಾರು 'ಅಂಡರ್ ಬ್ಯಾರೆಲ್ ಗ್ರೆನೇಡ್'ಗಳನ್ನು (ಯುಬಿಜಿ) ಪೊಲೀಸರು ವಶಪಡಿಸಿಕೊಂಡಿದ್ದರು.