ಪುರುಲಿಯಾ (ಪಶ್ಚಿಮ ಬಂಗಾಳ): ಮಾವೋವಾದಿಗಳಿಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ ಎಂದು ಸಿಎಂ ಮಮತಾ ಬ್ಯಾನರ್ಜಿ ಕೇಸರಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಚುನಾವಣೆಗೂ ಮುನ್ನ ಸುಳ್ಳು ಭರವಸೆ ನೀಡಿ ಜನರನ್ನು ಯಾಮಾರಿಸುತ್ತದೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹಲವು ಟಿಎಂಸಿ ನಾಯಕರು ಬಿಜೆಪಿ ಸೇರಿದ್ದಾರೆ. ಕೆಲವರು ಬಟ್ಟೆಯಂತೆ ಸಿದ್ಧಾಂತಗಳನ್ನು ಬದಲಾಯಿಸುತ್ತಾರೆ ಅನ್ನೋ ಮೂಲಕ ಅಧಿಕಾರಿ ಸಹೋದರರಿಗೆ ಮಮತಾ ಬ್ಯಾನರ್ಜಿ ಟಾಂಗ್ ಕೊಟ್ಟಿದ್ದಾರೆ.
ಒಂದು ಕಾಲದಲ್ಲಿ ಎಡಪಂಥೀಯರ ಕೇಂದ್ರವಾಗಿದ್ದ ಪುರುಲಿಯಾ ಜಿಲ್ಲೆಯ ರ‍್ಯಾಲಿಯಲ್ಲಿ ಮಾತನಾಡಿದ ದೀದಿ, ಬಿಜೆಪಿಗೆ ಸೇರಲು ಬಯಸುವವರು ಹೊರಡಬಹುದು. ಆದರೆ, ನಾವೆಂದಿಗೂ ಕೇಸರಿ ಪಕ್ಷಕ್ಕೆ ತಲೆ ಬಾಗುವುದಿಲ್ಲ ಎಂದರು.
ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿಯೂ ಇಲ್ಲಿನ ಜನತೆಗೆ ಬಿಜೆಪಿ ಟೊಳ್ಳು ಭರವಸೆ ನೀಡಿ ಹೆಚ್ಚಿನ ಸ್ಥಾನ ಗಳಿಸಿತ್ತು. ಆದರೆ, ಗೆದ್ದ ಬಳಿಕ ಅವರು ಇತ್ತ ತಲೆ ಹಾಕಿಲ್ಲ ಎಂದು ವಾಗ್ದಾಳಿ ನಡೆಸಿದರು.