ನವದೆಹಲಿ: 2002ರ ಗುಜರಾತ್ ಗಲಭೆ ವೇಳೆ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಪೈಕಿ ಓರ್ವ ಗುಜರಾತ್ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಮತ್ತು ಶಾಸಕರೊಂದಿಗೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ವಿವಾದ ಸೃಷ್ಟಿಸಿದೆ. ದಾಹೋದ್ ಜಿಲ್ಲೆಯ ಕರ್ಮಾಡಿ ಗ್ರಾಮದಲ್ಲಿ ಲಿಮ್ಖೇಡಾ ಗ್ರೂಪ್ ವಾಟರ್ ಸಪ್ಲೈ ಯೋಜನೆಯಡಿ ಪೈಪ್‌ಲೈನ್ ಶಂಕುಸ್ಥಾಪನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ದಹೋದ್ ಜಿಲ್ಲೆಯ ಸಂಸದ ಜಸ್ವಂತಸಿಂಗ್ ಭಭೋರ್ ಮತ್ತು ಸಂಸದರ ಸಹೋದರ ಹಾಗೂ ಲಿಮ್ಖೇಡಾ ಶಾಸಕ ಸೈಲೇಶ್ ಭಭೋರ್ ಕೂಡ ಭಾಗಿಯಾಗಿದ್ದರು.
ವೇದಿಕೆಯಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ಶೈಲೇಶ್ ಚಿಮನ್‌ಲಾಲ್ ಭಟ್ ಎಂಬಾತ ಶಾಸಕ ಮತ್ತು ಸಂಸದರೊಂದಿಗೆ ವೇದಿಕೆ ಮೇಲೆ ಕಾಣಿಸಿಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದು ಕಂಡುಬಂದಿದೆ. ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ನಡೆಸಿ ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ 2008 ರಲ್ಲಿ 11 ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷ ಸ್ವಾತಂತ್ರ ದಿನಾಚರಣೆಯಂದು ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಟಿಎಂಸಿಯ ಮಹುವಾ ಮೊಯಿತ್ರಾ ಮತ್ತು ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಹಾಗೂ ವಿರೋಧ ಪಕ್ಷದ ನಾಯಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಮಾರ್ಚ್ 22 ರಂದು ಈ ವಿಷಯವನ್ನು ತುರ್ತು ವಿಚಾರಣೆಯ ಪಟ್ಟಿಗೆ ನಿರ್ದೇಶಿಸಿತು ಮತ್ತು ಹೊಸ ಪೀಠ ರಚಿಸಲಾಗುವುದು ಎಂದು ಸಂತ್ರಸ್ತೆ ಬಿಲ್ಕಿಸ್ ಬಾನೊಗೆ ಭರವಸೆ ನೀಡಿತ್ತು.
ಪ್ರಕರಣದ ಹಿನ್ನೆಲೆ: 2002 ರಂದು ನಡೆದ ಗೋಧ್ರಾ ಗಲಭೆಯ ನಂತರ ಗುಜರಾತ್‌ನಲ್ಲಿ ಬಿಲ್ಕಿಸ್ ಬಾನೊ ಎಂಬವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಘಟನೆಯಲ್ಲಿ ಸಂತ್ರಸ್ತೆಯ ಮೂರು ವರ್ಷದ ಮಗು ಸೇರಿ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಜನವರಿ 21, 2008 ರಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಜೀವಾವಧಿ ಶಿಕ್ಷೆಗೆ ಗುರಿಯಾದ ಈ ಎಲ್ಲ ಅಪರಾಧಿಗಳು 15 ವರ್ಷ ಸೆರೆವಾಸ ಅನುಭವಿಸಿದ್ದರು. ನಂತರ ಖೈದಿಯೊಬ್ಬ ತನ್ನನ್ನು ಶೀಘ್ರ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಗುಜರಾತ್ ಸರ್ಕಾರ ಪಂಚಮಹಲ್ನ ಜಿಲ್ಲಾಧಿಕಾರಿ ಸುಜಲ್ ಮೇತ್ರಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಎಲ್ಲ 11 ಆರೋಪಿಗಳಿಗೆ ಕ್ಷಮಾದಾನ ನೀಡಲು ಸರ್ವಾನುಮತದಿಂದ ನಿರ್ಧರಿಸಿತ್ತು. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ತಿಳಿಸಿತ್ತು. ಈ ಸಂಬಂಧ ಎಲ್ಲರನ್ನೂ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಲಾಗಿತ್ತು.
ಇದನ್ನೂ ಓದಿ: 'ಪದೇ ಪದೆ ತುರ್ತು ವಿಚಾರಣೆಗೆ ಒತ್ತಾಯಿಸಬೇಡಿ': ಬಿಲ್ಕಿಸ್ ಬಾನೊ ವಕೀಲರಿಗೆ ಕೋರ್ಟ್ ಸೂಚನೆ