ಮಧುರೈ: ವೇದಿಕೆಯ ಮೇಲೆ ಭರತನಾಟ್ಯ ಮಾಡುತ್ತಲೇ ಕಲಾವಿದನೊಬ್ಬ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಕಾಳಿದಾಸ್(50) ಮೃತಪಟ್ಟ ಕಲಾವಿದರು. ಮಧುರೈನ ದೇವಸ್ಥಾನವೊಂದರಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಳಿದಾಸ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮದ ಅರ್ಧದಲ್ಲಿ ಸುಸ್ತಾಗಿ ನೃತ್ಯ ಮಾಡುವುದನ್ನು ನಿಲ್ಲಿಸಿ ವೇದಿಕೆಯ ಪಕ್ಕಕ್ಕೆ ಸರಿದಿದ್ದಾರೆ.
ಈ ವೇಳೆ ಅವರು ಹೃದಯಾಘಾತದ ಮುನ್ಸೂಚನೆ ಪಡೆದಿದ್ದಾರೆ. ಬಳಿಕ ಅಲ್ಲಿಯೇ ಇದ್ದವರಲ್ಲಿ ನೀರು ಕೇಳಿ ಪಡೆದು ಕುಡಿದಿದ್ದಾರೆ. ಬಳಿಕ ವೇದಿಕೆ ಮುಂಭಾಗ ಕುಳಿತುಕೊಂಡಿದ್ದಾರೆ. ಸಂಗೀತ, ನೃತ್ಯದಿಂದ ಮೈಮರೆತಿದ್ದ ಜನರು ಕಾಳಿದಾಸ್ ಕುಳಿತಿರುವುದನ್ನು ಗಮನಿಸಿಲ್ಲ.
ಹಾಡು ಮುಗಿದ ಬಳಿಕ ಕಲಾವಿದನ ಮಗಳೇ ಹೋಗಿ ಅವರನ್ನು ಅಪ್ಪಾ.. ಅಪ್ಪಾ ಎಂದು ಎಬ್ಬಿಸಲು ಯತ್ನಿಸಿದಾಗ ಅವರು ಮೃತಪಟ್ಟಿದ್ದು ಗೊತ್ತಾಗಿದೆ. ಇದರಿಂದ ಸಂಭ್ರಮದ ಕಾರ್ಯಕ್ರಮದಲ್ಲಿ ನಡೆದ ವಿಲಕ್ಷಣ ಘಟನೆಯು ಅಲ್ಲಿನ ಜನರನ್ನು ದಿಗ್ಭ್ರಾಂತರನ್ನಾಗಿಸಿದೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಇಹಲೋಕ ತ್ಯಜಿಸಿದ್ದರು. ಕಾಳಿದಾಸ್ ಅವರ ಇಬ್ಬರು ಮಕ್ಕಳೂ ಭರತನಾಟ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಪತ್ನಿ ಸಂಗೀತ ಶಿಕ್ಷಕಿಯಾಗಿದ್ದಾರೆ.
ಇದನ್ನೂ ಓದಿ: ಉ.ಪ್ರದೇಶ: ಪ್ರತಿಭಟನೆ ಬಳಿಕ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ