ಭೋಪಾಲ್: ಇಲ್ಲಿನ ಸಿಯೋನಿ ಪಟ್ಟಣದಲ್ಲಿ ಆಟೊರಿಕ್ಷಾದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ಒಬ್ಬ ಮಹಿಳೆ ಹಾಗೂ ಇಬ್ಬರು ಪುರುಷರನ್ನ ರಾಮ ಭಕ್ತರೆಂದು ಹೇಳಿಕೊಂಡ ಕೆಲವರು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ರಾಜಧಾನಿ ಭೋಪಾಲ್ನಿಂದ 350 ಕಿ.ಮೀ. ದೂರವಿರುವ ಸಿಯೋನಿ ಪಟ್ಟಣದಲ್ಲಿ ನಾಲ್ಕು ದಿನಗಳ ಹಿಂದೆ ನಡೆದಿರುವ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಮೂಲಗಳ ಪ್ರಕಾರ ಮಹಿಳೆ ಸೇರಿದಂತೆ ಮೂವರು ಆಟೊ ರಿಕ್ಷಾದಲ್ಲಿ ಗೋಮಾಂಸವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ ಯುವಕರು ಅವರನ್ನು ಆಟೊದೊಂದ ಕೆಳಗಿಳಿಸಿ ಮರಕ್ಕೆ ಕಟ್ಟಿ ಹಾಕಿ ಮರದ ರೆಂಬೆಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಲ್ಲದೆ ಚಪ್ಪಲಿಯಿಂದ ಅವರ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಆಕೆ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೀಗೆ ಹೊಡೆಯುವಾಗ ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿರುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ಇಷ್ಟೆಲ್ಲಾ ಘಟನೆ ನಡೆದರು ಸುಮ್ಮನೆ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಜನ ಪೊಲೀಸರಿಗೆ ಮಾಹಿತಿ ನೀಡದೆ ಅಮಾನವೀಯತೆ ಮೆರೆದಿದ್ದಾರೆ.
ಆರೋಪಿಗಳು ತಾವು ರಾಮಸೇನಾ ಕಾರ್ಯಕರ್ತರೆಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ವಿಡಿಯೊವನ್ನು ಅವರು ಫೇಸ್ಬಕ್ನಲ್ಲಿ ಪೋಸ್ಟ್ ಮಾಡಿದ್ದು, ನಂತರ ಡಿಲಿಟ್ ಮಾಡಿದ್ದಾರೆ.