ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ನಿಂದಾಗಿ ಸಂದಿಗ್ಧ ಪರಿಸ್ಥಿತಿ ಇರುವುದರಿಂದ ಎಲ್ಲಾ ಪ್ರಮುಖ ವೈದ್ಯಕೀಯ ಉಪಕರಣಗಳು ಮತ್ತು ಔಷಧಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಐವೈಸಿ, ಪ್ರಸ್ತುತ ಹ್ಯಾಂಡ್ ಸ್ಯಾನಿಟೈಸರ್‌ಗಳಿಗೆ ಶೇ. 18, ಫೇಸ್ ಮಾಸ್ಕ್ಗಳಿಗೆ ಶೇ. 5 ಮತ್ತು ಪ್ಯಾರಸಿಟಮಲ್ ಮಾತ್ರೆಗಳು, ಪಿಪಿಇ ಕಿಟ್‌ಗಳು ಹಾಗೂ ವೆಂಟಿಲೇಟರ್ ಇತ್ಯಾದಿಗಳಿಗೆ ಶೇ. 12 ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಆಸ್ಪತ್ರೆಗಳಿಗೆ ಮತ್ತು ಸಾರ್ವಜನಿಕರಿಗೆ ಈ ಉತ್ಪನ್ನಗಳನ್ನು ಖರೀಸಲು ದುಬಾರಿಯಾಗುತ್ತಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಮೇಲೆ ಈ ರೀತಿ ತೆರಿಗೆ ವಿಧಿಸಿರುವುದರಿಂದ ಜನರು ಹೆಣಗಾಡುತ್ತಿದ್ದಾರೆ. ಆದ್ದರಿಂದ, ಜನ ಸಾಮಾನ್ಯರಿಗೆ ಈ ವಸ್ತುಗಳು ಕೈಗೆಟುವ ದರಕ್ಕೆ ದೊರೆಯುವಂತೆ ಮಾಡಲು ಇವುಗಳ ಮೇಲಿನ ತೆರಿಗೆಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದೆ.
ಅಲ್ಲದೆ ಯುವ ಕಾಂಗ್ರೆಸ್ '#GSTFreeCorona' ಎಂಬ ಸಾಮಾಜಿಕ ಮಾಧ್ಯಮ ಹ್ಯಾಶ್ ಟ್ಯಾಗ್ ಪ್ರಾರಂಭಿಸಿದ್ದು, ಇದರ ಮೂಲಕ ವೆಂಟಿಲೇಟರ್, ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ಯಾರಸಿಟಮಲ್ ಮಾತ್ರೆಗಳು ಮತ್ತು ಇತರ ಅಗತ್ಯ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆಯನ್ನು ತೆಗೆದು ಹಾಕುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದೆ.