ಚೆನ್ನೈ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಪಕ್ಷದ ಬ್ಯಾನರ್ ಯುವತಿ ತಲೆ ಮೇಲೆ ಬಿದ್ದ ಘಟನೆ ನಡೆದಿತ್ತು. ದುರಂತ ಅಂದ್ರೆ, ಆಕೆಗೆ ಕೆಳಗೆ ಬಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಆಕೆಯ ಮೈಮೇಲೆ ಹರಿದಿದೆ. ಪರಿಣಾಮ ಆಕೆ ದಾರುಣವಾಗಿ ಸಾವಿಗೀಡಾದ ದುರ್ಘಟನೆ ಇಲ್ಲಿನ ಪಾಲಿಕರಣೈಯಲ್ಲಿ ನಡೆದಿದೆ.
23 ವರ್ಷದ ಶುಭಶ್ರೀ ಬಿಟೆಕ್ ಪದವೀಧರೆಯಾಗಿದ್ದು, ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಕೆಲ್ಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆಯ ಬೃಹತ್ ಬ್ಯಾನರ್ ಕೆಳಗೆ ಬಿದ್ದಿದೆ. ಬ್ಯಾನರ್ ಹೊಡೆತಕ್ಕೆ ಯುವತಿ ಆಯತಪ್ಪಿ ಸ್ಕೂಟರ್ನಿಂದ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಆಕೆಯ ಮೈಮೇಲೆ ಹರಿದು ಹೋಗಿದ್ದರಿಂದ ದೇಹ ಛಿದ್ರವಾಗಿದೆ. ಗಾಯಗೊಂಡ ಆಕೆಯನ್ನ ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತಾದ್ರೂ ಆಕೆ ಸಾವನ್ನಪ್ಪಿದ್ದರು.
ಮದ್ರಾಸ್ ಹೈಕೋರ್ಟ್ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಜೊತೆಗೆ ಮೃತಪಟ್ಟ ಶುಭಶ್ರೀ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇಂಥ ಘಟನಾವಳಿಗಳಿಂದ ನಮಗೆ ಸರ್ಕಾರದ ಮೇಲೆ ಭರವಸೆ ಕಡಿಮೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಎಐಎಡಿಎಂಕೆ ಪಕ್ಷದ ಮುಖಂಡನ ಮಗನ ಮದುವೆಗಾಗಿ ಅತಿ ದೊಡ್ಡ ಬ್ಯಾನರ್ ಹಾಕಲಾಗಿತ್ತು. ಈಗಾಗಲೇ ರಾಜ್ಯದಲ್ಲಿ ಹಾಕಲಾಗಿರುವ ಅನಧಿಕೃತ ಬ್ಯಾನರ್ ತೆರವುಗೊಳಿಸಲು ಕೋರ್ಟ್ ಸೂಚನೆ ಸಹ ನೀಡಿತ್ತು. ಈ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.
2017ರಲ್ಲಿ ಅಮೆರಿಕದಿಂದ ಕೊಯಮತ್ತೂರಿಗೆ ವಧುವನ್ನು ನೋಡಲು ಬಂದಿದ್ದ ಇಂಜಿನಿರ್ ಒಬ್ಬರು ಹೋಲ್ಡಿಂಗ್ಸ್ಗೆ ಬಲಿಯಾಗಿದ್ದ ಘಟನೆ ನಡೆದಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಹೋರ್ಡಿಂಗ್‌ಗಳಿಗೆ ಇನ್ನೂ ಎಷ್ಟು ಬಲಿ ಬೇಕಾಗಿದೆ? ಎಂದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಘಟನೆ ಹಿನ್ನೆಲೆಯಲ್ಲಿ ತಮಿಳುನಾಡಿನ ಇತರ ರಾಜಕೀಯ ಪಕ್ಷಗಳು ಅನಧಿಕೃತ ಹೋರ್ಡಿಂಗ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.