ನವದೆಹಲಿ: ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್‌ಗೆ ಮುಂದಿನ ವರ್ಷ ಭಾರತದಲ್ಲಿ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಇತರೆ ದೇಶಗಳಂತೆಯೇ ಭಾರತದ ತಜ್ಞರ ತಂಡಗಳು ಕೂಡ ಹೆಚ್ಚಿನ ಶ್ರಮ ವಹಿಸಿ ಲಸಿಕೆ ಸಂಶೋಧಿಸುತ್ತಿದ್ದಾರೆ. ನಾವು ಅತ್ಯಂತ ಸುಧಾರಿತ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ಮೇಲ್ಮನೆಯಲ್ಲಿ ಹೇಳಿದರು.
ಕೊರೊನಾ ವೈರಸ್ ತಗುಲಿ ಮೃತಪಟ್ಟವರ ಪ್ರಮಾಣ ಶೇಕಡಾ 1ಕ್ಕಿಂತಲೂ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಪ್ರಸ್ತುತ ಶೇಕಡಾ 1.64 ಸಾವಿನ ಪ್ರಮಾಣವಿದೆ. ಇದು ವಿಶ್ವದ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ತೀರಾ ಕಡಿಮೆ. ಸರ್ಕಾರ ಈ ಪ್ರಮಾಣವನ್ನು ಇನ್ನಷ್ಟು ತಗ್ಗಿಸುವ ಗುರಿ ಹೊಂದಿದೆ ಎಂದರು.
ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ದೇಶದಲ್ಲಿ 78ರಿಂದ 79ರಷ್ಟಿದೆ. ಇದು ಜಾಗತಿಕಮಟ್ಟದಲ್ಲಿ ಗರಿಷ್ಠ ಪ್ರಮಾಣವಾಗಿದೆ. ಭಾರತದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 5 ಮಿಲಿಯನ್ ಗಡಿ ದಾಟಿದೆ. ಆದರೆ ಆಕ್ಟೀವ್ ಪ್ರಕರಣಗಳ ಸಂಖ್ಯೆ ಶೇಕಡಾ 20ಕ್ಕಿಂತಲೂ ಕಡಿಮೆ ಇದೆ ಎಂದು ರಾಜ್ಯಸಭೆಯಲ್ಲಿ ಎದುರಾದ ಪ್ರಶ್ನೆಗೆ ಸಚಿವ ಹರ್ಷವರ್ಧನ್ ಉತ್ತರಿಸಿದ್ದಾರೆ.