ಉತ್ತರಕಾಶಿ: ಭಾರಿ ಮಳೆಗೆ ಉತ್ತರಾಖಂಡದ ಉತ್ತರಕಾಶಿಯ ಕೆಲ ಗ್ರಾಮಗಳು ತತ್ತರಿಸಿವೆ. ಸಂಕ್ರಿ ಗ್ರಾಮದಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಂತೆಯೇ ಜನರು ಗ್ರಾಮಗಳನ್ನು ಸಂಪರ್ಕಿಸುವ ಹಲರಾ ಖಾದ್ ನದಿ ದಾಟಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಂಚರಿಸುತ್ತಿದ್ದಾರೆ.
ಸದ್ಯ ಸ್ಥಳೀಯರು ಹಗ್ಗಗಳನ್ನೇ ತಾತ್ಕಾಲಿಕ ಸೇತುವೆಯಾಗಿ ಬಳಸುತ್ತಿದ್ದಾರೆ. ಜೊತೆಗೆ ನದಿಗೆ ಅಡ್ಡಲಾಗಿರುವ ಕಲ್ಲುಗಳ ಮೇಲೆ ಹೆಜ್ಜೆಯಿರಿಸಿ ಗ್ರಾಮಗಳ ನಡುವೆ ಸಂಪರ್ಕ ಸಾಧಿಸಲು ಮುಂದಾಗಿದ್ದಾರೆ. ಕಳೆದ ಸುಮಾರು 5 ದಿನಗಳಿಂದ ರಸ್ತೆ ಮಚ್ಚಲಾಗಿದ್ದು, ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಓಸ್ಲಾ, ಗಂಗಾಡ್, ಧಟ್ಮೀರ್ ಮತ್ತು ಸಿರ್ಗಾ ಗ್ರಾಮಗಳಲ್ಲಿ ಸೇಬು ಪ್ರಮುಖ ಬೆಳೆಗಳಲ್ಲೊಂದಾಗಿದ್ದು, ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸಬೇಕಾಗಿದೆ. ಆದರೆ ರಸ್ತೆ ಸಂಪರ್ಕ ಕಡಿತಗೊಂಡಿರುವ ಪರಿಣಾಮ ರೈತರು ಆತಂಕಕ್ಕೀಡಾಗಿದ್ದಾರೆ.
ಇನ್ನೂ ಮುಂಬರುವ ಮೂರು ದಿನಗಳಲ್ಲಿ ಹೆಚ್ಚು ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.