ಪಾಟ್ನಾ (ಬಿಹಾರ): ಯುಪಿಎ ಸರ್ಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕೆಲಸ ಮಾಡಲು ಬಿಡದೇ ಸುಮಾರು 10 ವರ್ಷಗಳ ಕಾಲ ವ್ಯರ್ಥವಾಗುವಂತೆ ಮಾಡಿತ್ತು ಎಂದು ಪ್ರಧಾನಿ ಮೋದಿ ಅಭಿಪ್ರಾಯ ಆರೋಪಿಸಿದ್ದಾರೆ.
ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸಸಾರಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿತೀಶ್ ಕುಮಾರ್ ಸರ್ಕಾರ ವೇಗವಾಗಿ ಕಾರ್ಯ ನಿರ್ವಹಿಸದೇ ಇದ್ದರೇ ಇನ್ನಷ್ಟು ಮಂದಿ ಕೊರೊನಾ ವೈರಸ್ಗೆ ಬಲಿಯಾಗುತ್ತಿದ್ದರು ಎಂದು ನಿತೀಶ್ ಕುಮಾರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು
ಈ ಮೊದಲು ಬಿಹಾರದಲ್ಲಿ ಅಪರಾಧ ಮತ್ತು ಭ್ರಷ್ಟಾಚಾರ ಹೆಚ್ಚಾಗಿತ್ತು ಎಂದು ಆರ್ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ''ಕೆಲವು ವರ್ಷಗಳ ಹಿಂದೆ ಬಾಲಕಿ ಮನೆಯಿಂದ ಹೊರ ನಡೆದಾಗ ಆಕೆಯ ಕುಟುಂಬವು ಹಿಂದಿರುಗುವವರೆಗೂ ಆತಂಕಕ್ಕೊಳಗಾಗುತ್ತಿತ್ತು. ಬಿಹಾರದಲ್ಲಿ ಸರ್ಕಾರಿ ಹುದ್ದೆಗಳಿಗಾಗಿ ಆಗಿನ ಸರ್ಕಾರ ಲಂಚ ಪಡೆಯುತ್ತಿತ್ತು. ಈಗ ಅದೆಲ್ಲಾ ಬದಲಾಗಿದೆ ಎಂಬುದನ್ನು ಜನರು ನೆನಪಿನಲ್ಲಿ ಇಟ್ಟುಕೊಳ್ಳಬೇಕು'' ಎಂದರು.
"ಸೂರ್ಯ ಮುಳುಗಿದರೆ ಎಲ್ಲಾ ಕೆಲಸಗಳನ್ನು ನಿಲ್ಲಿಸಿ, ಮನೆಗಳಿಗೆ ತೆರಳುವ ದಿನಗಳನ್ನು ಬಿಹಾರ ಜನತೆ ಮರೆಯಲು ಸಾಧ್ಯವಿಲ್ಲ. ಈಗ ರಸ್ತೆಗಳಲ್ಲಿ ಬೆಳಕಿದೆ. ಎಲ್ಲರೂ ಭಯವಿಲ್ಲದ ವಾತಾವರಣದಲ್ಲಿ ಬದುಕುತ್ತಿದ್ದಾರೆ'' ಎಂದು ಆರ್ಜೆಡಿ ವಿರುದ್ಧ ಮೋದಿ ಟೀಕಾಪ್ರಹಾರ ನಡೆಸಿದರು.
ಎನ್ಡಿಎ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದೆ. ಆದರೆ ಕೆಲವರು ಅದನ್ನು ಮತ್ತೆ ವಾಪಸ್ ತರುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಬಿಹಾರದ ಮತಗಳ ಮೂಲಕ ಗೆದ್ದು ಈ ರೀತಿ ಮಾತನಾಡುವುದು ಅವಮಾನ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಗಾಲ್ವಾನ್ ಘರ್ಷಣೆ ಮತ್ತು ಪುಲ್ವಾಮಾ ದಾಳಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ರಾಜ್ಯದ ಯೋಧರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ "ಬಿಹಾರದ ಮಕ್ಕಳು ಭಾರತ ಮಾತೆಗಾಗಿ ಪ್ರಾಣ ಸಮರ್ಪಣೆ ಮಾಡಿದ್ದು, ಅವರ ಪಾದಗಳಿಗೆ ತಲೆಬಾಗಿಸಿ ಗೌರವ ಸಲ್ಲಿಸುತ್ತೇನೆ'' ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿದರು.
ಬಿಹಾರದಲ್ಲಿ ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.