ಛಾತ್ರಾ(ಜಾರ್ಖಂಡ್): ಮೊಬೈಲ್ ಕಳ್ಳತನದ ಆರೋಪದ ಮೇಲೆ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಜನರು ಕ್ರೂರವಾಗಿ ಥಳಿಸಿರುವ ಘಟನೆ ಛಾತ್ರಾದಲ್ಲಿ ನಡೆದಿದೆ.
ಛಾತ್ರಾದ ಹಂಟರ್‌ಗಂಜ್ ಪೊಲೀಸ್ ಠಾಣೆ ಪ್ರದೇಶದ ಕೋಬನಾ ಗ್ರಾಮದಲ್ಲಿ ಸ್ವಾತಂತ್ರ್ಯ ದಿನದಂದು ಮೊಬೈಲ್ ಕಳ್ಳತನದ ಆರೋಪದ ಮೇಲೆ ಅಪ್ರಾಪ್ತ ಮಗು ಸೇರಿದಂತೆ ಇಬ್ಬರ ಕಾಲುಗಳನ್ನು ಹಗ್ಗದಲ್ಲಿ ಕಟ್ಟಿ, ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಕ್ರೂರವಾಗಿ ಥಳಿಸಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋ ಪ್ರಕಾರ, ಆರೋಪಿಗಳನ್ನು ಮೊದಲು ಜನರು ಹಗ್ಗದಿಂದ ಕಾಲುಗಳನ್ನು ಕಟ್ಟಿದ್ದಾರೆ. ಬಳಿಕ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಅವರನ್ನು ಥಳಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ನಂತರ, ಛಾತ್ರಾ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಎಸ್‌ಪಿ ರಿಷಭ್ ಝಾ ಅವರು ಎಸ್‌ಡಿಪಿಒ ಮತ್ತು ಹಂಟರ್‌ಗಂಜ್ ಠಾಣೆಯ ಪೊಲೀಸರಿಗೆ ದೋಷಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಓರ್ವ ಬಾಲಕ ಮತ್ತು ಇನ್ನೊಬ್ಬ ಯುವಕನನ್ನು ಕ್ರೂರವಾಗಿ ಥಳಿಸುವ ವ್ಯಕ್ತಿಯನ್ನು ಸುಶೀಲ್ ಸಿಂಗ್ ಎಂದು ಗುರುತಿಸಲಾಗಿದೆ. ಅಲ್ಲದೇ ಅವರು ಸರ್ಕಾರಿ ಶಿಕ್ಷಕ ಎಂದು ಹೇಳಲಾಗುತ್ತಿದೆ. ಇನ್ನೊಬ್ಬರು ಕೋಬನ ಪಂಚಾಯತ್ ಮುಖ್ಯಸ್ಥೆ ಸರಿತಾ ದೇವಿ ಎಂಬುವರ ಪತಿ ಸಂಜಯ್ ದಾಂಗಿ ಎಂದು ಹೇಳಲಾಗ್ತಿದೆ.