ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಫೆಬ್ರುವರಿ 1ರ ಬೆಳಗ್ಗೆ ಗಲ್ಲಿಗೇರಿಸಲಾಗುತ್ತಿದ್ದು, ಈ ಹಿನ್ನೆಲೆ ಅಪರಾಧಿಗಳ ಕೊನೆಯ ಆಸೆ ಏನು ಎಂಬುದನ್ನು ಜೈಲಿನ ಅಧಿಕಾರಿಗಳು ಕೇಳಿದ್ದಾರೆ.
ಕಾನೂನಿನ ಪ್ರಕಾರ ಅಪರಾಧಿಗಳನ್ನು ಗಲ್ಲಿಗೇರಿಸುವ ಮೊದಲು ಅವರ ಕೊನೆ ಆಸೆಯನ್ನು ಈಡೇರಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ನಿರ್ಭಯಾ ಅಪರಾಧಿಗಳು ಈವರೆಗೂ ಜೈಲಿನ ಅಧಿಕಾರಿಗಳ ಬಳಿ ತಮ್ಮ ಕೊನೆ ಆಸೆ ಏನು ಎಂಬುದನ್ನು ಹೇಳಿಲ್ಲ ಎಂದು ತಿಳಿದು ಬಂದಿದೆ.
ಭಯದಲ್ಲಿ ಊಟ ಬಿಟ್ಟ ಅಪರಾಧಿಗಳು
ಗಲ್ಲಿಗೇರಿಸುವ ವಿಷಯ ತಿಳಿದ ನಾಲ್ವರಲ್ಲಿ ಇಬ್ಬರು ಅಪರಾಧಿಗಳು ಕೆಲ ದಿನಗಳಿಂದ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದಾರಂತೆ. ಇವರಲ್ಲಿ ಒಬ್ಬನಾದ ವಿನಯ್ ಶರ್ಮಾ ಡೆತ್ ವಾರಂಟ್ ಹೊರಡಿಸಿದ ಎರಡು ದಿನಗಳವರೆಗೆ ಏನನ್ನೂ ತಿನ್ನುತ್ತಿರಲಿಲ್ಲವಂತೆ. ಈ ನಾಲ್ವರ ಮೇಲೆ ಜೈಲಿನ ಪೊಲೀಸ್ ಸಿಬ್ಬಂದಿ ನಿರಂತರವಾಗಿ ನಿಗಾ ಇಟ್ಟಿದ್ದಾರೆ. ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 2012ರ ಡಿ.16ರಂದು ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲ ಹೌಸ್ ಕೋರ್ಟ್ ನಾಲ್ವರು ಅಪರಾಧಿಗಳ ವಿರುದ್ಧ ಡೆತ್ ವಾರಂಟ್ ಹೊರಡಿಸಿತ್ತು.
ಕೈದಿಗಳ ಮೇಲೆ 24 ಗಂಟೆಗಳ ಕಣ್ಗಾವಲು
ದಿನದ 24 ಗಂಟೆಯೂ ಅಪರಾಧಿಗಳ ಮೇಲೆ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಅಪರಾಧಿಗಳ ಸೆಲ್ಗಳ ಭದ್ರತಾ ಉಸ್ತುವಾರಿ ಹೊತ್ತಿರುವ ಪೊಲೀಸರನ್ನು ಪ್ರತಿ 2 ಗಂಟೆಗಳಿಗೊಮ್ಮೆ ಬದಲಾವಣೆ ಮಾಡಲಾಗುತ್ತಿದೆ. ಈ ನಾಲ್ವರ ಸುರಕ್ಷತೆಗೆ ನಿತ್ಯ ಒಟ್ಟು 32 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಅವರು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೈಲು ಸಂಖ್ಯೆ 3ರ ಪ್ರತ್ಯೇಕ ಸೆಲ್ಗಳಲ್ಲಿ ಅಪರಾಧಿಗಳನ್ನು ಇರಿಸಲಾಗಿದೆ ಎಂದು ತಿಹಾರ್ ಜೈಲಿನ ಮೂಲಗಳು ತಿಳಿಸಿವೆ.
ಗಲ್ಲು ಶಿಕ್ಷೆ ಮುಂದೆ ಹೋಗುವ ಸಾಧ್ಯತೆ
ನಾಲ್ವರು ಅಪರಾಧಿಗಳ ಪೈಕಿ ಒಬ್ಬ ಮಾತ್ರ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಆದರೆ, ಆ ಅರ್ಜಿ ಈಗಾಗಲೇ ತಿರಸ್ಕೃತವಾಗಿದೆ. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಅದು ತಿರಸ್ಕೃತಗೊಂಡರೆ, ಅಂದಿನಿಂದ 14 ದಿನಗಳ ಕಾಲ ಗಲ್ಲು ಶಿಕ್ಷೆ ಮುಂದೂಡಬೇಕಾಗುತ್ತದೆ. ಈಗ ಗಲ್ಲಿಗೇರಿಸಲು ಒಂದು ವಾರ ಕಾಲಾವಕಾಶವಿದ್ದು, ಉಳಿದ ಮೂವರು ಅಪರಾಧಿಗಳಲ್ಲಿ ಒಬ್ಬರು ಕ್ಷಮಾದಾನ ಅರ್ಜಿ ಸಲ್ಲಿಸಿದರೆ ಮತ್ತೆ 14 ದಿನಗಳ ಕಾಲ ಶಿಕ್ಷೆ ಮುಂದೂಡಲಾಗುತ್ತದೆ.