ನವದೆಹಲಿ : ಡಿಸೆಂಬರ್ 16, 2012 ರಂದು ಇಡೀ ದೇಶವೇ ಬೆಚ್ಚಿಬೀಳುವ ಪೈಶಾಚಿಕ ಕೃತ್ಯವೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿದತ್ತು. 23 ವರ್ಷದ ಯುವತಿ ಮೇಲೆ ಆರು ಜನ ಕಾಮಾಂಧರು ಚಲಿಸುತ್ತಿದ್ದ ಬಸ್‌ನಲ್ಲಿ ಅತ್ಯಾಚಾರ ವೆಸಗಿ, ಹಲ್ಲೆ ಮಾಡಿ ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಯುವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಬಳಿಕ ಈ ಪ್ರಕರಣಕ್ಕೆ ನಿರ್ಭಯಾ ಎಂದು ಹೆಸರಿಡಲಾಯಿತು. ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇಂದು ಗಲ್ಲಿಗೇರಿಸಲಾಗಿದೆ.
ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಮಾಡಿದ್ದ ಆ ಆರು ಜನರು ಯಾರು, ಎಲ್ಲಿಯವರು ಎಂಬ ಸಂಕ್ಷಿಪ್ತ ವಿವರಣೆ ಇಲ್ಲಿದೆ:
1.ರಾಮ್ ಸಿಂಗ್: ಆರು ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್, ನಿರ್ಭಯಾ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದ ಬಸ್ ಚಾಲಕ. ದಕ್ಷಿಣ ದೆಹಲಿಯ ರವಿದಾಸ್ ಕ್ಯಾಂಪ್‌ನ ಕೊಳಗೇರಿ ಕಾಲೋನಿಯ ನಿವಾಸಿ. ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೊದಲ ಆರೋಪಿ ಈತನಾಗಿದ್ದ. ಇವನ ಸಹಾಯದಿಂದ ಇನ್ನುಳಿದ ಐವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಸಿಂಗ್ ಮಾರ್ಚ್ 10, 2013 ರಂದು ತಿಹಾರ್ ಜೈಲಿನೊಳಗೆ ನೇಣಿಗೆ ಶರಣಾಗಿದ್ದ.
2.ಮುಖೇಶ್ ಸಿಂಗ್: ಈತ ರಾಮ್ ಸಿಂಗ್ ಸಹೋದರ. ತಿಹಾರ್ ಜೈಲಿನಲ್ಲಿ ಇಂದು ಗಲ್ಲಿಗೇರಿಸಲಾಯಿತು. ರಾಜಸ್ಥಾನದ ಕರೋಲಿಯಿಂದ ಆತನನ್ನು ಬಂಧಿಸಲಾಗಿತ್ತು. ಕೃತ್ಯವೆಗಿದ ಬಳಿಕ ತಪ್ಪಿಸಿಕೊಂಡಿದ್ದ ಮುಖೇಶ್ ಸಿಂಗ್ನನ್ನು ನದಿ ದಂಡೆಯ ಮೇಲಿದ್ದ ಅವನ ಹಳ್ಳಿ ಮನೆಯಿಂದ ಪೊಲೀಸರು ಬಂಧಿಸಿದ್ದರು.
3.ಪವನ್ ಗುಪ್ತಾ: ಈತ ಗಲ್ಲಿಗೇರಿಸಲಾದ ಎರಡನೇ ಅಪರಾಧಿ. ಹಣ್ಣಿನ ವ್ಯಾಪಾರಿಯಾಗಿದ್ದ ಪವನ್ ಗುಪ್ತಾ ರವಿದಾಸ್ ಕ್ಯಾಂಪ್‌ನಲ್ಲಿದ್ದ. ರಾಮ್ ಸಿಂಗ್ ತನಿಖಾಧಿಕಾರಿಗಳನ್ನು ತಮ್ಮ ಮನೆಗೆ ಕರೆದೊಯ್ದಾಗ ಪವನ ಗುಪ್ತಾ ಪೊಲೀಸರ ಬಲೆಗೆ ಬಿದ್ದಿದ್ದ. ಅವನ ಮೊಬೈಲ್ ಫೋನ್ ಅಂದು ರಾತ್ರಿ ಅತ್ಯಾಚಾರದ ವೇಳೆ ಈತ ಅದೇ ಬಸ್ನಲ್ಲಿದ್ದ, ಅಲ್ಲದೇ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಬದನ್ನು ದೃಢಪಡಿಸಿತ್ತು.
4.ವಿನಯ್ ಶರ್ಮಾ: ಗಲ್ಲಿಗೇರಿಸಿದ ಮೂರನೇ ಅಪರಾಧಿ. ಜಿಮ್ ತರಬೇತುದಾರ ವಿನಯ್ ಕೂಡ ರವಿದಾಸ್ ಕ್ಯಾಂಪ್‌ನಲ್ಲಿ ವಾಸಿಸುತ್ತಿದ್ದ. ಆತನ ಜಿಮ್ ಬಳಿಯೇ ವಿನಯ್ ಶರ್ಮಾನನ್ನು ಬಂಧಿಸಲಾಗಿತ್ತು. ಘಟನೆಯ ಸಮಯದಲ್ಲಿ ತಾನು ಬಸ್‌ನಲ್ಲಿ ಇರಲಿಲ್ಲ ಮತ್ತು ಸಂಗೀತ ಸಮಾರಂಭದಲ್ಲಿದ್ದೆ ಎಂದು ಹೇಳಿಕೊಂಡಿದ್ದ. 2016 ರಲ್ಲಿ ತಿಹಾರ್ ಜೈಲಿನೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದ. 2020 ರ ಫೆಬ್ರವರಿಯಲ್ಲಿ ಜೈಲಿನ ಗೋಡೆಗೆ ತಲೆ ಬಡಿದುಕೊಂಡು ಸಣ್ಣಪುಟ್ಟ ಗಾಯಗಳಾಗಿದ್ದವು.
5.ಅಕ್ಷಯ್ ಕುಮಾರ್ ಸಿಂಗ್: ಗಲ್ಲು ಶಿಕ್ಷೆಗೆ ಒಳಗಾದ ನಾಲ್ಕನೇ ಅಪರಾಧಿ. ಬಸ್‌ನಲ್ಲಿ ರಾಮ್ ಸಿಂಗ್ ಅವರೊಂದಿಗೆ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಅಕ್ಷಯ್ನನ್ನು ಬಿಹಾರದ ನಕ್ಸಲ್ ಭದ್ರಕೋಟೆಯ ಪ್ರದೇಶದ ತಾಂಡ್ವಾ ಗ್ರಾಮದಿಂದ ಬಂಧಿಸಲಾಗಿತ್ತು. ಗಲ್ಲು ಶಿಕ್ಷೆಗೂ ಮೂರು ದಿನಗಳ ಮೊದಲು ರಾಷ್ಟ್ರಪತಿಗೆ ಎರಡನೇ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಅಲ್ಲದೇ ಪತ್ನಿ ಬಿಹಾರ್ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಳು.
6.ಜುವೆನೈಲ್: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಕೊನೆಯ ಅಪರಾಧಿ. ಅಪರಾಧದ ಸಮಯದಲ್ಲಿ ಈತ ಬಾಲಾಪರಾಧಿ ಆಗಿದ್ದ. ನಿರ್ಭಯಾ ಮತ್ತು ಅವಳ ಸ್ನೇಹಿತನನ್ನು ಬಸ್ ಹತ್ತಲು ಪ್ರೇರೇಪಿಸಿದ್ದನು. ಈತನನ್ನು ಆನಂದ ವಿಹಾರ್‌ನಿಂದ ಬಂಧಿಸಿದ್ದ ತನಿಖಾ ತಂಡಕ್ಕೆ ಒಂದು ಪ್ರಮುಖ ಸುಳಿವು ಸಿಕ್ಕಿತ್ತು. ಅಪರಾಧದ ಸಮಯದಲ್ಲಿ ಅವನು ಬಾಲಾಪರಾಧಿಯಾಗಿದ್ದರಿಂದ, ರಿಮ್ಯಾಂಡ್ ಹೋಮ್ಗೆ ಕಳುಹಿಸಿ, 2015 ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.