ತೆಲಂಗಾಣ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೊಡ್ಡ ಅಭಿಮಾನಿಯಾದ ತೆಲಂಗಾಣ ಮೂಲದ ಬುಸ್ಸಾ ಕೃಷ್ಣ ಅವರು ಭಾರತಕ್ಕೆ ಟ್ರಂಪ್ ಭೇಟಿ ನೀಡಿದ ಸಂದರ್ಭದಲ್ಲಿ ತಾವು ತಯಾರಿಸಿರುವ ಟ್ರಂಪ್ ವಿಗ್ರಹವನ್ನು ಅವರಿಗೆ ನೀಡುವ ಬಯಕೆಯನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಮೆರಿಕ ಹಾಗೂ ಭಾರತದ ದ್ವಿ ಪಕ್ಷೀಯ ಸಂಬಂಧ ಮತ್ತಷ್ಟು ಬಲಗೊಳ್ಳಬೇಕು. ಟ್ರಂಪ್ ರವರ ಪಕ್ಕಾ ಅಭಿಮಾನಿಯಾಗಿರುವ ಕೃಷ್ಣ, ಪ್ರತೀ ಶುಕ್ರವಾರ ಟ್ರಂಪ್ ದೀರ್ಘ ಆಯಸ್ಸಿಗಾಗಿ ಪ್ರಾರ್ಥಿಸಿ ಉಪವಾಸ ಮಾಡ್ತಾರೆ.ಅಲ್ಲದೇ ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಟ್ರಂಪ್ ಭಾವಚಿತ್ರವನ್ನು ಸಹ ತೆಗೆದುಕೊಂಡು ಪ್ರಾರ್ಥಿಸಿ ನಂತರ ಕೆಲಸ ಆರಂಭಿಸ್ತಾರೆ.
ಟ್ರಂಪ್ರವರನ್ನು ಭೇಟಿಯಾಗುವುದು ನನ್ನ ಮಹದಾಸೆಯಾಗಿದ್ದು, ನನ್ನ ಈ ಬಯಕೆಯನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿರುವುದಾಗಿ ಟ್ರಂಪ್ ಅಭಿಮಾನಿ ಕೃಷ್ಣ ತಿಳಿಸಿದ್ದಾರೆ. ಕೃಷ್ಣ ಎಲ್ಲರಂತೆ ಸಾಮಾನ್ಯ ಅಭಿಮಾನಿಯಲ್ಲ, ಅಮೆರಿಕ ಅಧ್ಯಕ್ಷ ಟ್ರಂಪ್ ಅನ್ನು ದೇವರೆಂದು ಆರಾಧಿಸುವ ಭಕ್ತ.
ಕೃಷ್ಣ ತಮ್ಮ ಮನೆಯ ಬಳಿ ಟ್ರಂಪ್ರವರ 6 ಅಡಿ ಪ್ರತಿಮೆಯನ್ನು ಸ್ಥಾಪಿಸಿದ್ದು, ಪ್ರತಿದಿನ ಚಾಚು ತಪ್ಪದೇ ಅದಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಟ್ರಂಪ್ ನನ್ನ ಪಾಲಿನ ದೇವರು, ಅದಕ್ಕಾಗಿಯೇ ನಾನು ಅವರ ಪ್ರತಿಮೆಯನ್ನು ನಿರ್ಮಿಸಿದೆ. ಈ ಪ್ರತಿಮೆಯನ್ನು ನಿರ್ಮಿಸಲು ಸುಮಾರು ಒಂದು ತಿಂಗಳು ಟೈಮ್ ತೆಗೆದುಕೊಂಡು 15 ಕಾರ್ಮಿಕರು ಅವರ ಪ್ರತಿಮೆ ನಿರ್ಮಿಸಿಕೊಟ್ಟರು ಎಂದು ಕೃಷ್ಣ ತಿಳಿಸಿದ್ದಾರೆ.
ಟ್ರಂಪ್ ಮೇಲಿನ ಇವರ ಪ್ರೀತಿ ಹಾಗೂ ಭಕ್ತಿಯನ್ನು ಕಂಡು ಗ್ರಾಮಸ್ಥರು ಇವರನ್ನು 'ಟ್ರಂಪ್ ಕೃಷ್ಣ' ಎಂದು ಪ್ರೀತಿಯಿಂದ ಕರೆಯಲು ಪ್ರಾರಂಭಿಸಿದ್ದಾರೆ, ಅಷ್ಟೇ ಅಲ್ಲ, ಜನ ಕೃಷ್ಣ ರವರ ಮನೆಯನ್ನು ''ಟ್ರಂಪ್ ನಿವಾಸ'' ಎಂದೇ ಕರೆಯುತ್ತಾರೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.