ಹೈದರಾಬಾದ್: ಆನ್ಲೈನ್ ಮೂಲಕ ಆಹಾರ ಸರಬರಾಜು ಮಾಡುವ ಮೊಬೈಲ್ ಆ್ಯಪ್ಗಳಾದ ಜೊಮಾಟೋ ಹಾಗೂ ಸ್ವಿಗ್ಗಿಯನ್ನು ಮೇ 7 ರ ತನಕ ತೆಲಂಗಾಣದಲ್ಲಿ ನಿಷೇಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಈ ಕುರಿತು ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ ಕೆ.ಚಂದ್ರಶೇಖರ್ ರಾವ್, ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಫುಡ್ ಡೆಲಿವರಿ ಮೊಬೈಲ್ ಆ್ಯಪ್ ಸೇವೆಗಳನ್ನು ರಾಜ್ಯದಲ್ಲಿ ಕಾರ್ಯನಿರ್ವಹಿಸದಂತೆ ನಿಷೇಧ ಹೇರಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಲಾಕ್ಡೌನ್ ಅನ್ನು ರಾಜ್ಯದಲ್ಲಿ ಮೇ 7ರ ತನಕ ಮುಂದೂಡಲಾಗಿದೆ. ದೆಹಲಿಯಲ್ಲಿ ಕೊರೊನಾ ಪಾಸಿಟಿವ್ ಇದ್ದ ಫಿಜಾ ಡೆಲಿವರಿ ಯುವಕನಿಂದ 69 ಮಂದಿಗೆ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರಾವ್ ಸ್ಪಷ್ಟಪಡಿಸಿದ್ದಾರೆ.
ಆನ್ಲೈನ್ನಲ್ಲಿ ಆಹಾರವನ್ನು ಆರ್ಡರ್ ಮಾಡಿ ತಿನ್ನುವುದಕ್ಕಿಂತ ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ತಾಜಾ ಆಹಾರವನ್ನು ತಯಾರಿಸಿ ತಿನ್ನುವಂತೆ ಸಲಹೆ ನೀಡಿದ್ದಾರೆ.
ತೆರಿಗೆ ಮೂಲಕ ರಾಜ್ಯದ ಬೊಕ್ಕಸಕ್ಕೆ ಆದಾಯ ತರುತ್ತಿರುವ ಸ್ವಿಗ್ಗಿ ಹಾಗೂ ಜೊಮಾಟೋವನ್ನು ಸ್ಥಗಿತಗೊಳಿಸುವುದು ತಮಗೂ ಇಷ್ಟವಿಲ್ಲ, ಆದರೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಿಷೇಧ ಅನಿವಾರ್ಯವಾಗಿದೆ ಎಂದಿದ್ದಾರೆ.