ನವದೆಹಲಿ: ಜುಲೈ 3ರಂದು ಕಾನ್ಪುರದಲ್ಲಿ ಎಂಟು ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿದ್ದ ವಿಕಾಸ್ ದುಬೆ ಮತ್ತು ಆತನ ಐವರು ಸಹಾಯಕರ ಘರ್ಷಣೆಯ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಕೋರಿ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಹಾಗೂ ನ್ಯಾ. ಆರ್. ಸುಭಾಷ್ ರೆಡ್ಡಿ ಮತ್ತು ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ವಿಷಯದ ವಿಚಾರಣೆ ನಡೆಸಲಿದೆ.
ಈ ಕುರಿತು ತುರ್ತು ವಿಚಾರಣೆ ಕೋರಿ ವಕೀಲ ಮತ್ತು ಅರ್ಜಿದಾರ ಘನಶ್ಯಾಮ್ ಉಪಾಧ್ಯಾಯ ಮನವಿ ಸಲ್ಲಿಸಿದ್ದರು.
ಮಧ್ಯಪ್ರದೇಶದ ಉಜೈನಿಯಿಂದ ವಿಕಾಸ್ ದುಬೆಯನ್ನು ಕಾನ್ಪುರಕ್ಕೆ ಕರೆದೊಯ್ಯುತ್ತಿದ್ದಾಗ ಎಸ್ಟಿಎಫ್ ಸಿಬ್ಬಂದಿಯೊಂದಿಗೆ ಘರ್ಷಣೆ ಉಂಟಾಗಿ ವಿಕಾಸ್ ದುಬೆಯನ್ನು ಎನ್‌ಕೌಂಟರ್ ಮಾಡಲಾಗಿದೆ. ಒಂದು ದಿನ ಮುಂಚಿತವಾಗಿ ಆತನನ್ನು ಬಂಧಿಸಲಾಗಿತ್ತು. ಆರೋಪಿಯನ್ನ ಕರೆದೊಯ್ಯುತ್ತಿದ್ದ ವಾಹನದ ಅಪಘಾತಕ್ಕೀಡಾಗಿತ್ತು. ಈ ವೇಳೆ, ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ದುಬೆ ಮೇಲೆ ಗುಂಡು ಹಾರಿಸಲಾಗಿತ್ತು.
ಇಲ್ಲಿಯವರೆಗೆ ಬೆಳಕಿಗೆ ಬಂದಿರುವ ಸಂಗತಿಗಳು ಮತ್ತು ಸನ್ನಿವೇಶಗಳ ಪ್ರಕಾರ, ಆರು ಆರೋಪಿಗಳನ್ನು ಎನ್‌ಕೌಂಟರ್ ಸೋಗಿನಲ್ಲಿ ಕೊಂದಿರುವುದು ತೀವ್ರ ಅಮಾನವೀಯ ಮತ್ತು ಅನಾಗರಿಕ ಕೃತ್ಯ ಎಂದು ಅರ್ಜಿದಾರರು ವಾದಿಸಿದ್ದಾರೆ.