ಅಯೋಧ್ಯೆ (ಉತ್ತರ ಪ್ರದೇಶ): ಆಗಸ್ಟ್ 5ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದ್ದು, ಇದರ ಬೆನ್ನಲ್ಲೇ ಸುನ್ನಿ ವಕ್ಫ್ ಮಂಡಳಿ ತನಗೆ ನೀಡಿರುವ ಐದು ಎಕರೆ ಜಮೀನಿನಲ್ಲಿ ಮಸೀದಿ ನಿರ್ಮಾಣ ಮಾಡಲು ಮುಂದಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಕೇಂದ್ರ ಸರ್ಕಾರ ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಮೀನು ನೀಡಿದ್ದು, ಇದರಲ್ಲಿ ಮಸೀದಿ, ಗ್ರಂಥಾಲಯ ಹಾಗೂ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ.
ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ಮಸೀದಿ ನಿರ್ಮಾಣವಾಗಲಿದೆ ಎಂದು ಅಹ್ಮದ್ ಫಾರೂಖ್ ತಿಳಿಸಿದ್ದು, ಇದಕ್ಕಾಗಿ ನಿರ್ಮಾಣಗೊಂಡಿರುವ ಟ್ರಸ್ಟ್ನಲ್ಲಿ 15 ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ತನಗೆ ನೀಡಿದ್ದ ಜಮೀನನ್ನು ಸ್ವೀಕರಿಸಿರುವುದಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಸುನ್ನಿ ವಕ್ಫ್ ಮಂಡಳಿ ಹೇಳಿಕೊಂಡಿತ್ತು. ಧನ್ನಿಪುರ ಗ್ರಾಮ ಅಯೋಧ್ಯೆಯಿಂದ 30 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿ ಶೇ.60ರಷ್ಟು ಮುಸ್ಲಿಂ ಸಮುದಾಯ ವಾಸವಿದೆ.
ಹಂತ ಹಂತವಾಗಿ ಅಯೋಧ್ಯೆ ರಾಮಮಂದಿರ ನಿರ್ಮಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದ್ದು, ಆಗಸ್ಟ್ 5ರಂದು ಭೂಮಿ ಪೂಜೆ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದು, ಅದಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪಿಸಲಾಗಿದೆ.