ನವದೆಹಲಿ: ಲೋಕಸಭಾ ಕಲಾಪದಲ್ಲೂ ರಾಜ್ಯ ರಾಜಕೀಯ ಬಿಕ್ಕಟ್ಟಿನ ಕುರಿತು ಪ್ರಸ್ತಾಪವಾಗಿದ್ದು, ಆಡಳಿತ ಮತ್ತು ವಿಪಕ್ಷ ನಾಯಕರ ಗಲಾಟೆಯ ಮಧ್ಯೆ ಚರ್ಚೆಗೆ ಅವಕಾಶ ಸಿಗಲಿಲ್ಲ.
ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ವಿಷಯ ಪ್ರಸ್ತಾಪ ಮಾಡಿ ಕೆಲ ನಿಮಿಷಗಳ ಕಾಲ ತಮ್ಮ ಮಾತು ಮುಂದುವರಿಸಿದರು. ಆದರೆ, ಆಡಳಿತ ಪಕ್ಷದ ನಾಯಕರು ಮೊದಲು ನಮಗೆ ಅವಕಾಶ ಸಿಗಬೇಕೆಂದು ಪಟ್ಟು ಹಿಡಿದ ಕಾರಣ ವಿಷಯ ಅಲ್ಲಿಗೇ ನಿಂತಿತು.
ಲೋಕಸಭೆ ಕಲಾಪವು ಒಂದು ಸಾಂವಿಧಾನಿಕ ಪ್ರಕ್ರಿಯೆ. ಇಲ್ಲಿ ಪಾಲ್ಗೊಂಡಿರುವವರು ಜನಪ್ರತಿನಿಧಿಗಳು. ರಾಷ್ಟ್ರಪತಿ ಹುದ್ದೆ ಒಂದು ಸಾಂವಿಧಾನಿಕ ಹುದ್ದೆಯಾದರೂ, ಕಲಾಪಗಳಲ್ಲಿ ಮಧ್ಯಪ್ರವೇಶಿಸುವ ಅವಕಾಶ ಇಲ್ಲ. ಅದೇ ರೀತಿ ರಾಜ್ಯ ವಿಧಾನಸಭಾ ಕಲಾಪಗಳಲ್ಲಿ ರಾಜ್ಯಪಾಲರು ಹೇಗೆ ಮಧ್ಯ ಪ್ರವೇಶಿಸುತ್ತಾರೆ? ಇದು ಸ್ಪೀಕರ್ನ ಹಕ್ಕು ಕಸಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರವು ಸಾಂವಿಧಾನಿಕವಾಗಿ ರಚನೆಯಾಗಿದೆ. ಅದನ್ನು ಬೀಳಿಸುವ ಪ್ರಯತ್ನ ನಡೆಯುತ್ತಲೇ ಇದೆ ಎಂದು ಹೇಳುತ್ತಿರುವಾಗಲೇ ಆಡಳಿತ ಪಕ್ಷದ ನಾಯಕರು ಮೊದಲು ತಾವು ನೋಟಿಸ್ ನೋಡಿದ ವಿಷಯಗಳ ಚರ್ಚೆಯಾಗಬೇಕೆಂದು ಪಟ್ಟು ಹಿಡಿದರು. ಈ ಕಾರಣದಿಂದಾಗಿ ರಾಜ್ಯದ ರಾಜಕೀಯ ವಿಷಯ ಚರ್ಚೆಗೆ ಬರಲಿಲ್ಲ.