ನವದೆಹಲಿ : ಅತ್ಯಾಚಾರ ಸಂತ್ರಸ್ತರ ಮಕ್ಕಳಿಗೆ 14 ವರ್ಷ ತುಂಬುವವರೆಗೆ ಉಚಿತ ಶಿಕ್ಷಣ ನೀಡುವಂತೆ ಸುಪ್ರೀಂಕೋರ್ಟ್ ಬುಧವಾರ ಜಾರ್ಖಂಡ್ನ ರಾಂಚಿಯ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.
ಅತ್ಯಾಚಾರಕ್ಕೊಳಗಾದವರು ಮಾನಸಿಕ ಆಘಾತವನ್ನು ಮಾತ್ರವಲ್ಲದೆ, ಸಮಾಜದಿಂದ ತಾರತಮ್ಯವನ್ನೂ ಅನುಭವಿಸುತ್ತಾರೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಹಾಗೂ ಎಂ ಆರ್ ಶಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಜಾರ್ಖಂಡ್ನ ರಾಜ್ಯದಲ್ಲಿ 2002ರ ಜೂನ್ನಲ್ಲಿ ನಾಲ್ವರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದು, ಅನೇಕ ಸೌಲಭ್ಯಗಳ ಬಗ್ಗೆಯೂ ಗಮನ ಹರಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಇದನ್ನೂ ಓದಿ: ಮುಸ್ಲಿಂ ರಾಷ್ಟ್ರಗಳಿಗೆ ವಿಧಿಸಿರುವ ಪ್ರಯಾಣ ನಿರ್ಬಂಧ ತೆರವುಗೊಳಿಸ್ತಾರಾ ಬೈಡನ್?
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಥವಾ ಇನ್ಯಾವುದೇ ಕೇಂದ್ರ ಸರ್ಕಾರದ ಯೋಜನೆಗೆ ಸಂತ್ರಸ್ತರನ್ನು ಪರಿಗಣಿಸಬೇಕೆಂದು ಸೂಚಿಸಲಾಗಿದ್ದು, ರಾಂಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಸಮರ್ಥ ಪ್ರಾಧಿಕಾರಗಳು ಸಂತ್ರಸ್ತರಿಗೆ ಒದಗಿಸಿದ ಪೊಲೀಸ್ ಭದ್ರತೆಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ನಿರ್ದೇಶಿಸಿದೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ಸಲುವಾಗಿ ಜಾರ್ಖಂಡ್‌ನಲ್ಲಿ ಈಗಾಗಲೇ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್, 1973ರ ಸೆಕ್ಷನ್ 357ಎ ಅಡಿ ರೂಪಿಸಲಾಗಿದೆ.