ತಿರುಪತಿ: ತಿರುಮಲ ದೇವಸ್ಥಾನದ ಪುರೋಹಿತರಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದರೂ ದೇವಾಲಯವು ತೆರೆದಿರುವ ಬಗ್ಗೆ ಪ್ರಧಾನ ಅರ್ಚಕ ಎ.ವಿ. ರಮಣ ದೀಕ್ಷಿತಲು ಕಳವಳ ವ್ಯಕ್ತಪಡಿಸಿದ್ದಾರೆ. ಮುಂದೊಂದು ದಿನ ಇದು ದೊಡ್ಡ ವಿಪತ್ತಾಗಿ ಕಾಡಲಿದೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 50 ರಲ್ಲಿ 15 ಪುರೋಹಿತರ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, 25 ಪುರೋಹಿತರ ಫಲಿತಾಂಶಗಳು ಇನ್ನಷ್ಟೇ ಬರಬೇಕಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ತಮ್ಮ ಟ್ವೀಟ್ ಟ್ಯಾಗ್ ಮಾಡಿರುವ ಅವರು, ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿಗಳು ದೇವರ ದರ್ಶನ ನಿಲ್ಲಿಸಲು ಅಥವಾ ರದ್ದು ಮಾಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
"ಇದೇ ರೀತಿ ಮುಂದುವರಿದರೆ ವಿಪತ್ತು ಸಂಭವಿಸಲಿದೆ. ದಯವಿಟ್ಟು ಕ್ರಮ ತೆಗೆದುಕೊಳ್ಳಿ" ಎಂದು ಅವರು ಟ್ವೀಟ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ, ಗೌರವಾನ್ವಿತ ಪ್ರಧಾನ ಅರ್ಚಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದು, ದರ್ಶನ ನಿಲ್ಲಿಸಿ ದೇವಾಲಯವನ್ನು ಮುಚ್ಚುವ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.
ದರ್ಶನಕ್ಕಾಗಿ ದೇವಾಲಯವನ್ನು ಪುನರಾರಂಭಿಸಿದಾಗಿನಿಂದ 140 ಟಿಟಿಡಿ ನೌಕರರಲ್ಲಿ ಕೊರೊನಾ ದೃಢಪಟ್ಟಿದ್ದು, ಅವರಲ್ಲಿ 14 ಅರ್ಚಕರು ಹಾಗೂ ಪ್ರಸಾದ ತಯಾರಿಸುವ 16 ಜನ ಸೇರಿದ್ದಾರೆ. ಸೋಂಕಿತರಲ್ಲಿ 70 ಜನ ಚೇತರಿಸಿಕೊಂಡಿದ್ದಾರೆ.
ಕೋವಿಡ್ -19 ಲಾಕ್‌ಡೌನ್‌ನಿಂದಾಗಿ 80 ದಿನಗಳ ಕಾಲ ಮುಚ್ಚಿದ್ದ ದೇವಾಲಯವನ್ನು ಜೂನ್ 8ರಂದು ಮತ್ತೆ ಯಾತ್ರಾರ್ಥಿಗಳಿಗೆ ತೆರೆಯಲಾಗಿತ್ತು. ಆರಂಭದಲ್ಲಿ ಕೋವಿಡ್ -19 ಪ್ರೋಟೋಕಾಲನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ದೇವಾಲಯವು ದಿನಕ್ಕೆ 6,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡುತ್ತಿತ್ತು. ನಂತರ ಯಾತ್ರಿಕರ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿತ್ತು.